ಬಾಗಲಕೋಟೆ: ಕಾರ ಹುಣ್ಣುಮೆ ರೈತಾಪಿ ವರ್ಗದವರಿಗೆ ಅಚ್ಚು ಮೆಚ್ಚಿನ ಹಬ್ಬವಾಗಿದೆ. ಏಕೆಂದರೆ ಎತ್ತುಗಳಿಗೆ ಮೈ ತೊಳೆದು, ಸುಂದರವಾಗಿ ಕಾಣುವಂತೆ ಬಣ್ಣ ಹಚ್ಚಿ, ವಿವಿಧ ವಸ್ತುಗಳಿಂದ ಅಲಂಕಾರ ಮಾಡಿ ಕರಿ ಹರಿಯುವ ಪದ್ಧತಿ ಇತ್ತು.
ಆದರೆ, ಈ ಬಾರಿ ಕೊರೊನಾ ಛಾಯೆ ಕರಿ ಹರಿಯುವುದರ ಮೇಲೆ ಬಿದ್ದಿದೆ. ಕೊರೊನಾ ಭೀತಿ ಹಿನ್ನೆಲೆ ಎತ್ತುಗಳನ್ನು ಓಡಿಸಿ ಕರಿ ಹರಿಯುವುದಕ್ಕೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಎತ್ತುಗಳನ್ನು ಅಲಂಕಾರ ಮಾಡಿ ಮನೆಯಲ್ಲಿಯೇ ಪೂಜೆ ಮಾಡಿದ್ದಾರೆ.
ಬಾಗಲಕೋಟೆ ನಗರದ ವಲ್ಲಭಭಾಯಿ ವೃತ್ತದಲ್ಲಿ ಕಳೆದ ಹಲವು ವರ್ಷಗಳಿಂದ ಎತ್ತು ಓಡಿಸಿ, ಕರಿ ಹರಿಯುವ ಪದ್ಧತಿ ಆಚರಿಸಿಕೊಂಡು ಬರುತ್ತಿದ್ದರು. ಸಂಜೆ ಆಗುತ್ತಿದ್ದಂತೆ ಎತ್ತುಗಳನ್ನು ಅಲಂಕಾರ ಮಾಡಿಕೊಂಡು ಬಂದು ಕರಿ ಹರಿಯುವುದಕ್ಕೆ ಎತ್ತುಗಳನ್ನು ಓಡಿಸುತ್ತಿದ್ದರು. ಆದರೆ ಈ ಬಾರಿ ನಿಷೇಧ ಮಾಡಿದ್ದರಿಂದ ಸಾವಿರಾರು ಜನರಿಂದ ತುಂಬಿರುತ್ತಿದ್ದ ರಸ್ತೆಗಳು ಖಾಲಿಯಾಗಿದ್ದವು.
ರಸ್ತೆ ಮೇಲೆ ಅಡ್ಡಲಾಗಿ ದಾರ ಕಟ್ಟಿ, ಅದಕ್ಕೆ ಒಣ ತೆಂಗಿನಕಾಯಿ, ಬೇವಿನ ತಪ್ಪಲು ಸೇರಿದಂತೆ ಇತರ ವಸ್ತುಗಳನ್ನು ಕಟ್ಟುತ್ತಾರೆ. ಯಾವ ಎತ್ತು ಹರಿಯುತ್ತದೇಯೋ ಆ ಎತ್ತು ಬಿಳಿ ಬಣ್ಣ ಇದ್ದರೆ ಬಿಳಿ ಜೋಳ ಹೆಚ್ಚಾಗಿ ಬೆಳೆಯುತ್ತದೆ, ಕಂದು ಬಣ್ಣದ ಎತ್ತು ಹರಿದರೆ ಕೆಂಪು ಜೋಳ ಬೆಳೆಯುತ್ತದೆ ಎಂಬ ಪ್ರತೀತಿ ಇತ್ತು. ಆದರೆ ಈ ಬಾರಿ ಸಂಪ್ರದಾಯದಂತೆ ಕೇವಲ 2 ಎತ್ತುಗಳನ್ನು ಓಡಿಸಿ ಹಬ್ಬಕ್ಕೆ ಕೊನೆಹಾಡಲಾಯಿತು.