ಬಾಗಲಕೋಟೆ: ಮಾಜಿ ಸಚಿವ ಹಾಗೂ ಶಾಸಕರಾಗಿರುವ ಮುರಗೇಶ ನಿರಾಣಿ ಒಡೆತನದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಯಿಂದ ಹೊರ ಬರುವ ದಟ್ಟ ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಕಾರ್ಖಾನೆ ಮೇಲೆ ಕ್ರಮ ಜರುಗಿಸಬೇಕು ಎಂದು ರೈತರು, ಪರಿಸರ ಮಾಲಿನ್ಯ ನಿಯಂತ್ರಣ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ರೈತರು ಧರಣಿ ಕುಳಿತಿದ್ದಾರೆ. ಮೈಗೂರು ಗ್ರಾಮದ ಬಳಿ ಇರುವ ಬೀಳಗಿ ಶಾಸಕ ಮುರುಗೇಶ್ ನಿರಾಣಿ ಅವರ ಒಡೆತನದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಯಿಂದ ಪರಿಸರಕ್ಕೆ ಹಾನಿ ಉಂಟಾಗುವಂತಹ ಹೊಗೆ ಬಿಡುಗಡೆ ಆಗುತ್ತಿದೆ. ಇದರಿಂದ ಪಕ್ಕದಲ್ಲಿರುವ ಜಮೀನಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದ್ದು, ಸೂಕ್ತ ಫಸಲು ಬರದೇ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣ ವಾಗಿದೆ.
ಮಣ್ಣಿನ ಜೊತೆ ಕಾರ್ಖಾನೆ ರಾಸಾಯನಿಕ ಪದಾರ್ಥಗಳು ಮಿಶ್ರಣವಾಗುತ್ತಿದೆ. ಇದರಿಂದ ಬೆಳೆಗಳಿಗೂ ಕಲ್ಮಶದಿಂದ ಹಾನಿಯುಂಟಾಗುತ್ತಿದೆ. ಅಲ್ಲದೇ ಕಾರ್ಖಾನೆಯ ಜಾಗದಲ್ಲಿ ಹಾಕಿರುವ ತ್ಯಾಜ್ಯದಿಂದಾಗಿ ಪಕ್ಕದ ಹೊಲಗಳ ಮಣ್ಣು, ಬೆಳೆ ಹಾಳಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಮೂರು ವರ್ಷದಿಂದ ತೊಂದರೆ ಅನುಭವಿಸುತ್ತಿರುವ ರೈತರು, ಕಾರ್ಖಾನೆ ವಿರುದ್ಧ ಕ್ರಮಕ್ಕಾಗಿ ಆಗ್ರಹ ಮಾಡಿದ್ದಾರೆ. ಕಾರ್ಖಾನೆಯಿಂದ 40 ಎಕರೆಗೂ ಹೆಚ್ಚು ಜಮೀನಿನಲ್ಲಿ ಫಲವತ್ತಾದ ಮಣ್ಣು ಹಾಗೂ ಬೆಳೆ ನಾಶವಾಗುತ್ತದೆ. ಮೊದಲೇ ಕೊರೊನಾ ದಿಂದ ತತ್ತರಗೊಂಡಿರುವ ರೈತರಿಗೆ ಕಾರ್ಖಾನೆ ಇನ್ನಷ್ಟು ಮಾರಕವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.