ಬಾಗಲಕೋಟೆ: ಬಾದಾಮಿ ಮತಕ್ಷೇತ್ರದಲ್ಲಿ ಶಾಸಕ ಹಾಗೂ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಎರಡನೇ ದಿನದ ಪ್ರವಾಸ ಹಮ್ಮಿಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮನೆ ಹಕ್ಕು ಪತ್ರ ಕೇಳಲು ಬಂದ ಮಹಿಳೆಯರ ಮುಂದೆ 'ಚಿಮ್ಮನಕಟ್ಟಿ ಜಿಂದಾಬಾದ್' ನಡೆಯಿರಿ ಎಂದು ಸಿದ್ದರಾಮಯ್ಯ ಹೇಳಿದರು. ಮಹಿಳೆಯರು ಮನೆ ಹಕ್ಕು ಪತ್ರ ವಿತರಿಸಿ ಎಂದು ಮನವಿ ಮಾಡುತ್ತಿದ್ದಾಗ, ನನಗೆ ಬಾಯಾರಿಕೆಯಾಗಿದೆ ನೀರು ಕೊಡ್ರೋ ಎಂದು ಅವರು ಕೇಳಿದರು.
ನಂತರ ನಂದಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ವೀರಯ್ಯ ಮನೆಗೆ ಭೇಟಿ ನೀಡಿ, ಮೃತನ ಕುಟುಂಬಸ್ಥರಿಗೆ ಐದು ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು. ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ಹಣ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಳಿಕ ಮೃತ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಮನೆಗೆ ಭೇಟಿ ನೀಡಿ, ಆಕೆಯ ಮಕ್ಕಳಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ಹಣ ನೀಡಿದರು.
ಇದಾದ ಬಳಿಕ ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದರು. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರ ಭಾಷಣ ಆಲಿಸಲು ಬಂದಿದ್ದ ಜನರು, ಸಾಮಾಜಿಕ ಅಂತರ ಇಲ್ಲದೇ ಕುಳಿತುಕೊಂಡಿದ್ದ ದೃಶ್ಯಗಳು ಕಂಡುಬಂದವು. ಕೊರೊನಾ ಬಗ್ಗೆ ಜಾಗೃತಿ, ಎಚ್ಚರಿಕೆ ವಹಿಸಬೇಕು. ನೀವು ಈ ರೀತಿ ಸೇರಿದರೆ ಸಿದ್ದರಾಮಯ್ಯ ಇದ್ದ ಸಭೆಯಲ್ಲಿ ಜನ ಹೀಗೆ ಇದ್ರು ಅಂತಾರೆ ಎಂದರು.