ಬಾಗಲಕೋಟೆ: ನಗರದಲ್ಲಿ ಎಲೆಕ್ಟ್ರಾನಿಕ್ ವಾಹನ ತಯಾರಿಕೆ ಕಾರ್ಖಾನೆ ತಲೆ ಎತ್ತಲಿದ್ದು, ಇದರಿಂದ ಈ ಭಾಗದ ಯುವಕರಿಗೆ ಉದ್ಯೋಗ ಅವಕಾಶ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ಧಿಗೂ ಪೂರಕ ವಾತಾವರಣ ನಿರ್ಮಾಣವಾಗಲಿದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ಕಂಪನಿಗಳು ಒಪ್ಪಿಗೆ ಸೂಚಿಸಿದ್ದು, ಒಪ್ಪಂದಕ್ಕೆ ಸಹಿ ಆಗಿದೆ. ಬೆಂಗಳೂರಿನ ಸ್ಪಾರ್ಟ್ ಅಪ್ ಕಂಪನಿ ಬಾಲನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಪ್ರಸ್ತಾವಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸೋಲಾರ್ ವಿದ್ಯುತ್, ಕೆಮಿಕಲ್ ಘಟಕವನ್ನು ಸಹ ಭವಿಷ್ಯದಲ್ಲಿ ಸ್ಥಾಪಿಸುವ ಗುರಿಯನ್ನು ಈ ಕಂಪನಿ ಇಟ್ಟುಕೊಂಡಿದೆ.
ಬಾಗಲಕೋಟೆ ನಗರದಿಂದ ಸುಮಾರು 20 ಕಿ. ಲೋ ಮೀಟರ್ ದೂರದ ಅಚನೂರು ಹಾಗೂ ಭಗವತ್ ಗ್ರಾಮದ ಬಳಿ ಸುಮಾರು 140 ಎಕರೆ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ವರ್ಷದಲ್ಲಿಯೇ ಕಾಮಗಾರಿ ಆರಂಭಗೊಂಡು, ಆರು ತಿಂಗಳೊಳಗೆ ಉತ್ಪಾದನೆ ಆರಂಭ ಮಾಡುವ ನಿರೀಕ್ಷೆ ಇದೆ.
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆಗಿರುವ ಬಾಗಲಕೋಟೆ ನಗರದ ಜನತೆಗೆ ಉದ್ಯೋಗ ಇಲ್ಲದೆ ಪರದಾಡುವಂತಹ ಸ್ಥಿತಿ ಎದುರಾಗಿರುವುದರಿಂದ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಘಟಕ ಕಾರ್ಖಾನೆ ಆರಂಭವಾದಲ್ಲಿ ಉದ್ಯೋಗದ ಜೊತೆಗೆ ಇತರ ಚಿಕ್ಕ ಪುಟ್ಟ ವ್ಯಾಪಾರ ವಹಿವಾಟು ನಡೆದು ಜನರು ಆರ್ಥಿಕವಾಗಿ ಸದೃಢರಾಗುವ ಅವಕಾಶ ಸಿಗಲಿದೆ ಎಂಬ ಆಶಾಭಾವನೆ ಜನರಲ್ಲಿ ಮೂಡಿದೆ.