ಬಾಗಲಕೋಟೆ: ಉದ್ದಿಮೆ ಸ್ಥಾಪಿಸಲು ಮುಂದೆ ಬಂದವರಿಗೆ ಜಮೀನು, ನೀರು ಹಾಗೂ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಂಡವಾಳ ಹೂಡಿ ಉದ್ದಿಮೆ ಸ್ಥಾಪಿಸುವವರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಕಾಯ್ದೆಗೆ ಸಾಕಷ್ಟು ತಿದ್ದುಪಡಿ ತರುವ ಕೆಲಸ ಮಾಡಲಾಗುತ್ತಿದೆ. ಈ ತಿದ್ದುಪಡಿ ಕಾಯ್ದೆಯಿಂದ ಕೈಗಾರಿಕೆ ಸ್ಥಾಪಿಸುವ ಉದ್ದಿಮೆದಾರರಿಗೆ ಬಹಳಷ್ಟು ಅವಕಾಶ ದೊರೆಯಲಿದೆ ಎಂದರು.
ಜಿಲ್ಲೆಯಲ್ಲಿ ಹೊಸದಾಗಿ ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದಲ್ಲಿ ಸುಲಭವಾಗಿ ಎಲ್ಲಾ ರೀತಿಯ ಅನುಮತಿ ದೊರೆಯಲಿವೆ. ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು. ಜಾಗ ಇಲ್ಲದಿದ್ದರೆ ಜಮೀನು ಗುರುತಿಸಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಈ ಹಿಂದೆ ಕೃಷಿ ಜಮೀನನ್ನು ಕೃಷಿಯೇತರ ಮಾಡಲು 6 ತಿಂಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈ ತಿದ್ದುಪಡಿ ಕಾಯ್ದೆಯಿಂದ ಜಮೀನು ಪಡೆಯಲು ಸರಳೀಕರಣಗೊಳಿಸಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲವೂ ಸರಳೀಕರಣವಾಗಬೇಕೆಂಬುದು ಪ್ರಧಾನಮಂತ್ರಿಗಳ ಉದ್ದೇಶವಾಗಿದೆ ಎಂದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಜಿಲ್ಲಾ ಕೇಂದ್ರಸ್ಥಾನ ನವನಗರದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಮಾಡಲು ಜಮೀನು ಇಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಗುರುತಿಸಬೇಕಾಗಿದೆ. 200 ರಿಂದ 300 ಎಕರೆ ಜಮೀನು ಗುರುತಿಸಿ, ಆ ಜಮೀನನ್ನು ಅಭಿವೃದ್ಧಿ ಪಡಿಸಿದರೆ ಉದ್ದಿಮೆದಾರರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಹೊಸದಾಗಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಜಮೀನು ಗುರುತಿಸಿ ಪ್ರಸ್ತಾವನೆ ಕಳುಹಿಸಿದಲ್ಲಿ ಶೀಘ್ರದಲ್ಲಿಯೇ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದರು.
ನವನಗರದ ಆಗ್ರೋಟೆಕ್ ಪಾರ್ಕ್ ಗಾಗಿ 100 ಎಕರೆ ಜಮೀನನ್ನು ನೀಡಲಾಗಿತ್ತು. ಆ ಜಮೀನಿನಲ್ಲಿ ಕೇವಲ ಕೋಲ್ಡ್ ಸ್ಟೋರೇಜ್ ಮಾತ್ರ ಮಾಡಿದ್ದಾರೆ. ಉಳಿದ ಪ್ರದೇಶವನ್ನು ಅಭಿವೃದ್ಧಿ ಪಡಿಸಿರುವುದಿಲ್ಲ. ಬೇರೆಯವರಿಗೆ ಮನಸೋ ಇಚ್ಛೆಯಿಂದ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ 2005 ರಲ್ಲಿ ಅನುಮೋದನೆ ನೀಡಿ ಆರು ವರ್ಷಗಳ ಕಾಲಾವಧಿಯಲ್ಲಿ ಅಭಿವೃದ್ಧಿಪಡಿಸಲು ತಿಳಿಸಲಾಗಿತ್ತು. ಆದರೆ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ. ಕಾಲಾವಕಾಶ ಕೇಳಿದ ಹಿನ್ನಲೆಯಲ್ಲಿ ಎರಡು ಬಾರಿ ಅವಕಾಶ ಕಲ್ಪಿಸಲಾದರೂ ಸಹ ಅಭಿವೃದ್ಧಿಗೊಳ್ಳದೇ ಇರುವ ಬಗ್ಗೆ ಸಮಗ್ರ ವಿವರಣೆ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಇಲಕಲ್ ತಾಲೂಕಿನ ಬಲಕುಂದಿಯಲ್ಲಿ 94 ಎಕರೆ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆಲವೊಂದು ಮೂಲಭೂತ ಸೌಲಭ್ಯಗಳು ಬಾಕಿ ಇದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಂದ ಗ್ರಾನೈಟ್ ಮತ್ತು ಟೆಕ್ಸ್ ಟೈಲ್ ಉದ್ದಿಮೆಗಳ ಸ್ಥಾಪನೆಗೆ ಅರ್ಜಿಗಳು ಬಂದಿರುವುದಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಷ ಸಭೆಯಲ್ಲಿ ತಿಳಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಭೇಟಿ ಪರಿಶೀಲನೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಎದುರಿಗೆ ಇರುವ ನವನಗರದ ಕೈಗಾರಿಕಾ ಪ್ರದೇಶಕ್ಕೆ ಸಚಿವ ಜಗದೀಶ ಶೆಟ್ಟರ್ ಭೇಟಿ ನೀಡಿ ಪರಿಶೀಲಿಸಿದರು. ಕೈಗಾರಿಕಾ ಅಭಿವೃದ್ಧಿ ಕುರಿತು ಉದ್ಯಮಿಗಳ ಜೊತೆ ಚರ್ಚಿಸಿದರು. ಕೈಗಾರಿಕಾ ಪ್ರದೇಶದಲ್ಲಿರುವ ಕಾಸಟ್ ಫುಡ್ ಇಂಡಸ್ಟ್ರೀಸ್, ಜ್ಯೋತಿ ಫುಡ್ ಇಂಡಸ್ಟ್ರೀಜ್, ಪವನ ಟೆಕ್ಸಟೈಲ್ಸ ಇಂಡಸ್ಟ್ರೀಸ್ ಹಾಗೂ ಗ್ರೀನ್ ಫುಡ್ ಪಾರ್ಕ್ ಗೆ ಭೇಟಿ ನೀಡಿದರು.