ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಇವರ ಆರ್ಥಿಕ ನೆರವಿನೊಂದಿಗೆ ಜಿಲ್ಲೆಯಿಂದ ಆಯ್ಕೆ ಮಾಡಿದ 25 ಜನ ರೈತರನ್ನು ಅಂತಾರಾಜ್ಯ ಅಧ್ಯಯನ ಪ್ರವಾಸಕ್ಕೆ ನಿರ್ದೇಶಕ ಡಾ.ವೈ.ಕೆ.ಕೋಟಿಕಲ್ ಚಾಲನೆ ನೀಡಿದರು.
ತೋಟಗಾರಿಕೆ ವಿವಿ ಆವರಣದಲ್ಲಿ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ರೈತರ ಆರ್ಥಿಕ ಅಭಿವೃಧ್ಧಿ ಮಾಡಿಸಲು ಈ ಅಧ್ಯಯನ ಪ್ರವಾಸ ಅವಶ್ಯವಾಗಿದೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ದಾಳಿಂಬೆ ಬೆಳೆಗಳ ಪ್ರಾತ್ಯಕ್ಷಿಕೆಗಳಿಗೆ ಆದ್ಯತೆ ನೀಡಿ ಮಹಾರಾಷ್ಟ್ರದ ಕೊಲ್ಲಾಪುರದ ಕನ್ಹೇರಿ, ಬಾರಾಮತಿ, ರಾಜಗುರು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ದಾಳಿಂಬೆ ಮತ್ತು ದ್ರಾಕ್ಷಿ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೈತರು ತೋಟಗಾರಿಕೆ ಬೆಳೆಗಳಿಂದ ಸುಸ್ಥಿರ ಅಭಿವೃದ್ಧಿ ಕಾಪಾಡಿಕೊಳ್ಳಬೇಕಾಗಿದೆ. ಈ ಪ್ರವಾಸವು ರೈತರಿಗೆ ಪ್ರಯೋಜನ ನೀಡಲಿ ಎಂದು ಹಾರೈಸಿದರು.