ಬಾಗಲಕೋಟೆ: ನಾನು ಬಿಜೆಪಿ ಹಿರಿಯ ನಾಯಕ, ಬಹಳ ಕೆಳಮಟ್ಟದಿಂದ ಪಕ್ಷ ಕಟ್ಟಿದ್ದೇನೆ. ಯಾರೂ ಎಂಎಲ್ಎ ಇರದ ವೇಳೆಯಲ್ಲಿ ಶಾಸಕ ಆದವ ನಾನು ಆದರೀಗ ನನ್ನನ್ನು ಕಡೆಗಣಿಸಲಾಗಿದೆಯೆಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಬಾಗಲಕೋಟೆ ನಗರಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅಡ್ವಾಣಿ ಉದಾಹರಣೆ ನೀಡಿ ತಮ್ಮ ಪರಿಸ್ಥಿತಿಯನ್ನು ಹೇಳಿಕೊಂಡರು. ಬಿಜೆಪಿಯಲ್ಲಿ ಅಡ್ವಾನಿಯವರ ಪರಿಸ್ಥಿತಿ ಏನಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ಒಂದೊಂದು ಯುಗ ಇರುತ್ತದೆ. ಆ ಯುಗದಲ್ಲಿ ಬೇರೆ ಬೇರೆ ಬೆಳವಣಿಗೆಯಾಗುತ್ತದೆ ಎಂದ ಅವರು, ನನಗೇನು 75 ವಯಸ್ಸಾಗಿಲ್ಲ. ಇನ್ನು ನನಗೆ ಭವಿಷ್ಯವಿದೆ ಕರ್ನಾಟಕದ ನಂಬರ್ ಒನ್ ಆಗುವ ಅವಕಾಶವಿದೆ. ಅಲ್ಲದೆ ಕರ್ನಾಟಕ ಸಿಎಂ ಆಗುವ ಅವಕಾಶವಿದೆ ಯಾಕಿಲ್ಲ ಎಂದು ಟಾಂಗ್ ನೀಡಿದರು.
ನನ್ನ ಮೇಲೆ ಯಾವುದಾದಾರೂ ಭ್ರಷ್ಟಾಚಾರ ಆರೋಪವಿದೆಯೆ? ಏನಾದರೂ ಹಗರಣ ಮಾಡಿದೆನಾ? ಎಂದು ಅವರ ಕುರಿತು ಹೇಳಿಕೊಂಡರು. ಅಲ್ಲದೇ, ಹಿಂದುತ್ವದ ಪರ ಇರುವ ಒಳ್ಳೆಯ ಲೀಡರ್ ಅಂತ ಜನ ನನ್ನ ಒಪ್ಪಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು. ಅಷ್ಟೇ ಅಲ್ಲದೇ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಕಾಡಿಬೇಡಿ ಕೈಕಾಲು ಹಿಡಿದು ಮಂತ್ರಿಯಾಗುವಷ್ಟು ಕೆಳ ರಾಜಕಾರಣ ಮಾಡುವವ ನಾನಲ್ಲ ಎಂದು ಸ್ಪಷ್ಟಪಡಿಸಿದರು.