ಬಾಗಲಕೋಟೆ: ಸಾಮಾನ್ಯವಾಗಿ ದೇವರಿಗೆ ಹೂ, ಹಣ್ಣು ಕಾಯಿ, ಸಿಹಿ ತಿಂಡಿ ತಿನಿಸುಗಳು ಹಾಗೂ ವಿಭಿನ್ನ ಬಗೆಯ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸುವುದು ವಾಡಿಕೆ. ಆದರೆ ಈ ದೇವಸ್ಥಾನದಲ್ಲಿ ಮಾತ್ರ 'ಸಾರಾಯಿ'ಯೇ ದೇವರಿಗೆ ನೈವೇದ್ಯ. ಅಚ್ಚರಿ ಆದ್ರೂ ಇದು ಸತ್ಯ. ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮದ ರಂಗನಾಥ ದೇವಾಲಯದಲ್ಲಿ ಈ ವಿಶಿಷ್ಟ ಪದ್ಧತಿ ಜಾರಿಯಲ್ಲಿದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನದಿಂದ 9 ದಿನಗಳ ನಂತರ ಈ ಲಕ್ಷ್ಮೀ ರಂಗನಾಥ ದೇವಾಲಯ ಜಾತ್ರಾ ಮಹೋತ್ಸವ ಜರುಗುತ್ತದೆ. ಅದ್ಧೂರಿಯಾಗಿ ನಡೆಯುವ ಈ ಜಾತ್ರೆಯ ಸಮಯದಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರು, ಸಾರಾಯಿ ಬಾಟಲ್ ತಂದು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ದೇವತೆಗಳು ರಾಕ್ಷಸರನ್ನು ಸಂಹಾರ ಮಾಡಿದ ನಂತರ ಸೋಮರಸ ಸೇವಿಸಿ, ವಿಜಯೋತ್ಸವ ಆಚರಣೆ ಮಾಡಿದ್ದರಂತೆ. ಈ ಹಿನ್ನೆಲೆ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತದೆ ಎಂಬುದು ಐತಿಹ್ಯ.
ಈ ದೇವಾಲಯಕ್ಕೆ ಬರುವ ಭಕ್ತರು ಜಾತ್ರೆ ಸಮಯದಲ್ಲಿ ಸಾರಾಯಿ ಬಾಟಲ್ ಹಿಡಿದುಕೊಂಡು ಬಂದು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ನಂತರ ಸಾಮೂಹಿಕವಾಗಿ ತೀರ್ಥ ಸೇವನೆ ಎಂದು ಮಾಡುತ್ತಾರೆ. ಲಕ್ಷ್ಮೀ ರಂಗನಾಥ ದೇವರಿಗೆ ಸಾರಾಯಿ ನೈವೇದ್ಯ ಮಾಡಿದರೆ ಎಲ್ಲಾ ಸಂಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಭಕ್ತರು ಸಿಹಿ ತಿಂಡಿಯ ಜತೆಗೆ ಸಾರಾಯಿಯನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.
'ಸಾರಾಯಿ ಜಾತ್ರೆ' ಎಂದೇ ಪ್ರಸಿದ್ಧಿ: ರಾಜ್ಯದ ವಿವಿಧ ಪ್ರದೇಶ ಸೇರಿದಂತೆ ಮಹಾರಾಷ್ಟ್ರ ಹಾಗೂ ಗೋವಾದಿಂದಲೂ ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಾರೆ. ಸಂಜೆ ಹೊತ್ತಿನಲ್ಲಿ ರಥೋತ್ಸವ ಅದ್ಧೂರಿಯಾಗಿ ನೆರವೇರಲಿದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿಯೇ ಲಕ್ಷ್ಮೀ ರಂಗನಾಥ ದೇವಾಲಯ ಜಾತ್ರೆ 'ಸಾರಾಯಿ ಜಾತ್ರೆ' ಎಂದೇ ಪ್ರಸಿದ್ಧಿಯಾಗಿದೆ. ಭಕ್ತರು ತೆಂಗಿನಕಾಯಿ ಕರ್ಪೂರ, ಊದಬತ್ತಿ ಸೇರಿದಂತೆ ಇತರ ಸಹಿ ಪದಾರ್ಥಗಳ ಜತೆಗೆ ಮದ್ಯಪ್ರಿಯ ದೇವರು ಎಂದು, ಸಾರಾಯಿ ಬಾಟಲ್ ಸಹ ತೆಗೆದುಕೊಂಡು ಬರುತ್ತಾರೆ.
ಶ್ರೀಮಂತರು ಗುಣಮಟ್ಟದ ಹೆಚ್ಚಿನ ದರದ ಮದ್ಯ ತರುತ್ತಾರೆ. ಬಡ ಹಾಗೂ ಮಧ್ಯಮ ವರ್ಗದವರು, ಕಡಿಮೆ ದರದ ಸಾರಾಯಿ ತೆಗೆದುಕೊಂಡು ಬರುತ್ತಾರೆ. ನಂತರ ಭೋಪಾಲ ತುಂಬಿಸಿ, ಸಾಮೂಹಿಕವಾಗಿ ಊಟ ಹಾಗೂ ತೀರ್ಥ ಸೇವನೆ ಮಾಡುತ್ತಾರೆ. ಎತ್ತಿನ ಬಂಡಿಗಳ ಹಾಗೂ ಟ್ರ್ಯಾಕ್ಟರ್ಗಳ ಮೂಲಕ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಾರೆ.
ಇದನ್ನೂ ಓದಿ: ಸದಾ ಫೋನ್ನಲ್ಲಿ ಮಾತನಾಡುತ್ತಾಳೆ ಎಂದು ಪತ್ನಿಯನ್ನ ಬರ್ಬರವಾಗಿ ಕೊಂದ ಪತಿ