ಬಾಗಲಕೋಟೆ: ಕಬ್ಬಿನ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳ ಪಟ್ಟಣದಲ್ಲಿ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ವಿಜಯಪುರ -ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.
ಸಕ್ಕರೆ ಕಾರ್ಖಾನೆಗಳು ಸೂಕ್ತ ದರ ನಿಗದಿ ಮಾಡಬೇಕು ಹಾಗೂ ಹಿಂದಿನ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಮುಧೋಳ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆ ಟೈಯರ್ಗೆ ಬೆಂಕಿ ಹಚ್ಚಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ರೈತರಿಗೆ ಸಕ್ಕರೆ ಕಾರ್ಖಾನೆಯವರು ಸೂಕ್ತ ದರ ಸೇರಿದಂತೆ ಬಾಕಿ ಹಣ ಪಾವತಿಸುವಲ್ಲಿ ವಿಳಂಬ ಧೋರಣೆ ತೋರುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಈ ಕೂಡಲೇ ಕಾರ್ಖಾನೆಯವರಿಗೆ ಸೂಚನೆ ನೀಡದೆ ಇದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯಾಚರಣೆ ಪ್ರತಿಭಟನೆ: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಕಬ್ಬು ಸಾಗಿಸಲು ಮುಂದಾಗಿದ್ದ ಚಾಲಕನ ಮೇಲೆ ಇತರೆ ರೈತರು ಆಕ್ರೋಶಗೊಂಡರು. ಅಲ್ಲದೇ ಆತನಿಗೆ ಥಳಿಸಿದ್ದಾರೆ. ಮುಧೋಳ ಜಮಖಂಡಿ ರಸ್ತೆಯಲ್ಲಿರುವ ಸಿದ್ದಾಪೂರ ಫ್ಯಾಕ್ಟರಿ ಬಳಿ ಘಟನೆ ನಡೆದಿದೆ.