ಬಾಗಲಕೋಟೆ: ಕಬ್ಬಿನ ಬಾಕಿ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ರೈತ ಸಂಘಟನೆಯವರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡರಾದ ಈರಣ್ಣ ಹಂಚಿನಾಳ ಹಾಗೂ ಜಿಪಂ ಉಪಾಧ್ಯಕ್ಷರಾದ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಇನ್ನೂ 309.65 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, ಇದುವರೆಗೂ ಪಾವತಿಸಿಲ್ಲ. ಈ ಬಗ್ಗೆ ಸರ್ಕಾರ ಆದೇಶ ಮಾಡಿದರೆ ಕಿಮ್ಮತ್ತು ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ಮಾತನಾಡಿ, ಸಕ್ಕರೆ ಕಾರ್ಖಾನೆ ಹಣವನ್ನು ಅಪೆಕ್ಸ್ ಬ್ಯಾಂಕ್ನವರು ನೀಡಬೇಕಾಗಿದೆ. ಕೊರೊನಾ ಹಿನ್ನೆಲೆ ಸ್ವಲ್ಪ ತಡವಾಗಿದೆ. ಇದೇ 14ರ ನಂತರ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜೊತೆಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.