ಬಾಗಲಕೋಟೆ: ರಾಜ್ಯದಲ್ಲಿ ಉಂಟಾದ ಪ್ರವಾಹ ಬಗ್ಗೆ ಸಂಸದರು ಪ್ರಧಾನಿ ಬಳಿಗೆ ನಿಯೋಗ ತೆರಳಿ ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಒತ್ತಾಯ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವರು ಹಾಗೂ ಹಣಕಾಸು ಸಚಿವರು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿ ತೆರಳಿದರು. ಆದರೆ ಯಾವುದೇ ನೆರವು ಘೋಷಿಸದಿರುವುದು ದುರದೃಷ್ಟಕರ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ, ಆಸ್ತಿ, ಬೆಳೆ ಕಳೆದುಕೊಂಡವರ ಎಲ್ಲಾ ರೀತಿಯ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಅವರಿಗೆ ಹೊಸ ಸಾಲ ನೀಡಲು ಬ್ಯಾಂಕುಗಳಿಗೆ ಸರ್ಕಾರ ಸೂಚನೆ ನೀಡಬೇಕು ಎಂದರು.
ಪ್ರವಾಹ ದಿಂದ ಸುಮಾರು 2 ಲಕ್ಷ ಎಕರೆ ಪ್ರದೇಶದಲ್ಲಿ ಕಬ್ಬು, ಬಾಳೆ, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದ್ದು, ಇದುವರಗೆ ಸಮೀಕ್ಷೆ ಕಾರ್ಯ ಆಗಿಲ್ಲ. ಪರಿಹಾರ ಧನ ಸೇರಿದಂತೆ ಇತರ ಸೌಲಭ್ಯ ಸರ್ಕಾರ ಯಾವಾಗ ನೀಡಲಿದೆ ಎಂಬುದು ಪ್ರಶ್ನೆಯಾಗಿದ್ದು, ಈ ಕೂಡಲೇ ಸರ್ಕಾರ ಈ ಬಗ್ಗೆ ಕಾರ್ಯೋನ್ಮುಕವಾಗಬೇಕು ಎಂದು ಕುರುಬೂರು ಹೇಳಿದರು.