ಬಾಗಲಕೋಟೆ: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಾದ ಮನೆ ಹಾನಿ, ಬೆಳೆಹಾನಿ, ಜನ-ಜಾನುವಾರುಗಳ ಸಮೀಕ್ಷೆಯನ್ನು ಅಧಿಕಾರಿಗಳು ನಿಷ್ಪಕ್ಷಪಾತವಾಗಿ, ಮಾನವೀಯತೆಯಿಂದ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿಂದು ಜಿಲ್ಲೆಯ ಪ್ರವಾಹ ಪರಿಹಾರ ಹಾಗೂ ಅತಿವೃಷ್ಟಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತಮಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಪ್ರವಾಹದಿಂದಾದ ಸಂತ್ರಸ್ತರಿಗೆ ಎಲ್ಲ ರೀತಿಯ ಪರಿಹಾರ ಒದಗಿಸಲಾಗುತ್ತಿದೆ. ಇತ್ತೀಚೆಗೆ ಮಳೆಯಿಂದಾದಹಾನಿಯನ್ನು ನಿಷ್ಪಕ್ಷಪಾತವಾಗಿ ಮಾನವೀಯತೆಯಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಎಂದರು.
ಸಮೀಕ್ಷೆಯಲ್ಲಿ ಮಣ್ಣಿನ ಮನೆಗಳಿಗೆ ಹೆಚ್ಚು ಗಮನ ಕೊಟ್ಟು ಸೂಕ್ತ ಪರಿಹಾರ ಕೊಡುವ ಕೆಲಸವಾಗಬೇಕು. ರೈತರ ಹೊಲದಲ್ಲಿ ಕಟ್ಟಿದ ಮನೆ ಹಾನಿಗಳನ್ನು ಪಾರ್ಮ್ ಹೌಸ್ ಎಂದು ಸಮೀಕ್ಷೆಯಲ್ಲಿ ಪರಿಗಣಿಸುವಂತೆ ತಿಳಿಸಿದರು. ಕಳೆದ ಮೂರು ದಿನಗಳಿಂದ ಸುರಿದ ಮಳೆ ಹಾಗೂ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 109 ಗ್ರಾಮಗಳು ಹಾನಿಗೊಳಗಾಗಿವೆ. ಒಟ್ಟಾರೆ 888 ಬಾಗಶಃ ಮನೆಗಳು ಹಾನಿಗೊಳಗಾಗಿವೆ. 853 ಕುಟುಂಬಗಳು ಬಾಧಿಗೊಂಡಿದ್ದು, ಈ ಪೈಕಿ ಹುನಗುಂದ ತಾಲೂಕಿನಲ್ಲಿ ಒಟ್ಟು 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 3,404 ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಈ ನೆರೆ ಹಾಗೂ ಪ್ರವಾಹದಿಂದ ಬಾದಾಮಿ ತಾಲೂಕಿನ ಶಿರಬಡಗಿ ಗ್ರಾಮದ ರಾಮಪ್ಪ ಮಲ್ಲಪ್ಪ ಹೊನ್ನನ್ನವರ ಪ್ರವಾಹದಿಂದ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. 17 ಜಾನುವಾರುಗಳು ಹಾಗೂ 4,480 ಕೋಳಿಗಳಿಗೆ ಜೀವಹಾನಿಯಾಗಿದ್ದು, ತಕ್ಷಣ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ಹುನಗುಂದ ತಾಲೂಕಿನಲ್ಲಿ ನಿಂಬಲಗುಂದಿ, ಚಿತ್ತರಗಿ, ಗಂಜಿಹಾಳ, ಕಮತಗಿ, ಹಿರೇಮಾಗಿ, ಚಿಕ್ಕಮಾಗಿ, ಹಿರೇಮಳಗಾವಿ, ಕೆಂಗಲ್, ಒರಗೊಡದಿನ್ನಿ, ಬಿಸನಾಳಕೊಪ್ಪ ಹಾಗೂ ಇದ್ದಲಗಿ ಗ್ರಾಮಗಳು ನೆರೆ ಹಾಗೂ ಪ್ರವಾಹಕ್ಕೆ ತುತ್ತಾಗಿವೆ. ಯುಕೆಪಿಗೆ ಸಂಬಂಧಿಸಿದಂತೆ 13 ಗ್ರಾಮಗಳ ಪೈಕಿ 9 ಗ್ರಾಮಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಉಳಿದ ಗ್ರಾಮ ಹಾಗೂ ಆಶ್ರಯ ಮನೆಗಳ ಹಕ್ಕುಪತ್ರಗಳನ್ನು ನವೆಂಬರ್ 10ರೊಳಗಾಗಿ ನೀಡಲು ಕಾರಜೋಳ ಸೂಚಿಸಿದ್ದಾರೆ.
ಕಳೆದ ಆಗಸ್ಟ್ ಮಾಹೆಯಲ್ಲಿ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದ ಒಟ್ಟು 7,353 ಮನೆಗಳ ಪೈಕಿ 4,756 ಮನೆಗಳಿಗೆ ಪರಿಹಾರ ನೀಡಲಾಗಿದೆ. ಎ ಮತ್ತು ಬಿ ವರ್ಗದ 5 ಲಕ್ಷ ಪರಿಹಾರದಡಿ ಈಗಾಗಲೇ 1,115 ಮನೆಗಳಿಗೆ 1 ಲಕ್ಷ ರೂ. ಮೊದಲ ಕಂತಿನ ಪರಿಹಾರ ಜಮಾ ಮಾಡಲಾಗಿದೆ. ಸಿ ವರ್ಗದ ಮನೆಗಳಿಗೆ 3,296 ಮನೆಗಳಿಗೆ ರೂ. 25 ಸಾವಿರ ಜಮಾ ಮಾಡಲಾಗಿದೆ. ಪ್ರವಾಹ ಸಂದರ್ಭದಲ್ಲಿ ಆರ್.ಸಿ ಸೆಂಟರ್‍ಗಳಲ್ಲಿರುವ ಜಾಲಿಗಳನ್ನು ಸ್ವಚ್ಛಗೊಳಿಸಿದ ಬಾಕಿ ಹಣ ಇಲ್ಲಿಯವರೆಗೆ ನೀಡಿಲ್ಲ. ತಕ್ಷಣ ಹಣ ನೀಡಲು ಸೂಚಿಸಿದರು. ಬಾಕಿ ಹಣ ನೀಡುವಲ್ಲಿ ಬೇಜವಾಬ್ದಾರಿ ತೋರಿದ ಹುನಗುಂದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಕಾರಜೋಳ ಸೂಚಿಸಿದರು.
ಪ್ರವಾಹಕ್ಕೆ ಒಳಗಾದ ಮಳೆ ಆಶ್ರಿತ ಜಮೀನುಗಳಿಗೆ ಪ್ರತಿ ಹೆಕ್ಟೇರ್‍ಗೆ ರೂ. 16,600, ನೀರಾವರಿ ಜಮೀನುಗಳಿಗೆ ಪ್ರತಿ ಹೆಕ್ಟೇರ್‍ಗೆ ರೂ.23,500 ಹಾಗೂ ಹಣ್ಣುಗಳ ಬೆಳೆಗಳಿಗೆ ಪ್ರತಿ ಹೆಕ್ಟೇರ್‍ಗೆ ರೂ.28,000 ಪರಿಹಾರ ನೀಡಲಾಗುತ್ತಿದೆ. ಪ್ರತಿಯೊಬ್ಬರ ಖಾತೆಗಳನ್ನು 1 ರೂ. ಜಮಾ ಮಾಡಿ ಪರಿಶೀಲಿಸಲಾಗುತ್ತಿದ್ದು, ಪರಿಶೀಲನೆ ನಂತರ ಪರಿಹಾರ ಮಾಡಲಾಗುತ್ತದೆ ಎಂದರು. ವಿವಿಧ ಜಲಾಶಯಗಳಾದ ಹಿಪ್ಪರಗಿ 1.68 ಲಕ್ಷ ಕ್ಯೂಸೆಕ್, ಆಲಮಟ್ಟಿ 2.50 ಲಕ್ಷ, ಹಿಡಕಲ್ 7,200, ನವೀಲುತೀರ್ಥ 5,704 ಹಾಗೂ ನಾರಾಯಣಪುರ ಜಲಾಶಯದಿಂದ 3.27 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ತಿಳಿಸಿದರು.