ಬಾಗಲಕೋಟೆ: ಮುಧೋಳ ತಾಲೂಕಿನ ಪ್ರವಾಹ ಪೀಡಿತ ಗುಲಗಾಲಜಂಬಗಿ ಗ್ರಾಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಸತಿ ಸಚಿವ ವಿ.ಸೋಮಣ್ಣ ಭೇಟಿದರು. ಗ್ರಾಮದಲ್ಲಿ ನೆರೆಯಿಂದ ಹಾನಿ ಆಗಿರುವ ಮನೆಗಳನ್ನು ವೀಕ್ಷಣೆ ಮಾಡಿ, ಪರಿಹಾರ ಧನ ಸಿಕ್ಕಿರುವ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಹಾನಿಯಾಗಿರುವ ಮನೆಗಳನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಪರಿಹಾರ ನೀಡಲು, ಜಿಲ್ಲಾಧಿಕಾರಿ ರಾಜೇಂದ್ರ ಹಾಗೂ ಸಿಇಓ ಗಂಗೂಬಾಯಿ ಮಾನಕರ್ ಅವರಿಗೆ ತಿಳಿಸಿದರು.
ಈ ಸಮಯದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಸೇರಿ, ಗೋವಿಂದ ಕಾರಜೋಳ ಅವರು ಅಭಿವೃದ್ಧಿಯ ಕೆಲಸ ಮಾಡುತ್ತಿದ್ದಾರೆ. ಇವರ ಆಡಳಿತಾವಧಿಯಲ್ಲಿ ಒಂದೇ ಒಂದು ಜಾತಿ ನಿಂದನೆ ಕೇಸ್ ದಾಖಲಾಗಿಲ್ಲ, ಹೀಗಾಗಿ ಅವರಿಗೆ ಚುನಾವಣೆಯಲ್ಲಿ ಸೋಲೇ ಇಲ್ಲ ಎಂದರು. ಇನ್ನು ಮನೆಯನ್ನು ಕಳೆದುಕೊಂಡವರಿಗೆ ನಮ್ಮ ಸರ್ಕಾರ ಎಲ್ಲ ವ್ಯವಸ್ಥೆ ಮಾಡಲಿದ್ದು, ದಯವಿಟ್ಟು ಯಾರು ಸಾಲ ಮಾಡಬೇಡಿ. ಯಾರಿಗೆ ಮನೆ ಅಗತ್ಯವಿದೆಯೋ ಅವರಿಗೆ ಮನೆ ನೀಡುತ್ತೇವೆ ಎಂದು ತಿಳಿಸಿದರು.
ಇನ್ನು ಸೋಮೇಶ್ವರ ಪ್ರೌಢ ಶಾಲೆಯ ಮಕ್ಕಳು ಉಭಯ ನಾಯಕರನ್ನು ಬಿಸಿಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಮಕ್ಕಳು ಬಿಸಿಲಿನಲ್ಲಿಯೇ ನಿಂತಿದ್ದರು. ಈ ಕುರಿತು ಸೋಮಣ್ಣ ಅವರ ಗಮನಕ್ಕೆ ಬಂದಾಗ ಶಾಲೆಯ ಮುಖ್ಯ ಗುರುಗಳನ್ನು ಕರೆದು, ಮಕ್ಕಳನ್ನು ಹೀಗೆ ಬಿಸಿಲಿನಲ್ಲಿ ನಿಲ್ಲಿಸಬೇಡಿ ಅವರನ್ನು ನೆರಳಿನಲ್ಲಿ ಕುರಿಸಿ ಎಂದರು. ಇದಕ್ಕೆ ಧ್ವನಿ ಗೂಡಿಸಿದ ಕಾರಜೋಳ ಅವರು, ಮಕ್ಕಳನ್ನು ಕರೆಯಿರಿ ಎಂದು, ಮಕ್ಕಳ ಹತ್ತಿರ ಹೋಗಿ ಚೆನ್ನಾಗಿ ಓದಿ ಎಂದು ಶುಭ ಹಾರೈಸಿದರು.