ಬಾಗಲಕೋಟೆ : ಕೋವಿಡ್ ಹಿನ್ನೆಲೆ ಈ ಬಾರಿ ಬಸವ ಜಯಂತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಆಚರಣೆ ಮಾಡೋಣ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು, ಯಾರೂ ಸಹ ಅದ್ಧೂರಿಯಾಗಿ ಆಚರಣೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೂಡ ಅಸಮಾಧಾನಗೊಳ್ಳದೆ ಈ ಒಂದು ವರ್ಷ ಸರಳವಾಗಿ ಮನೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಚರಣೆ ಮಾಡೋಣ ಎಂದು ತಿಳಿಸಿದರು.
ಬಸವಣ್ಣನವರ ವಚನವನ್ನ ಎಲ್ಲರೂ ಪಾಲಿಸುವುದು ಅಗತ್ಯವಿದೆ. ಬಸವಣ್ಣನವರು ಹೇಳಿದಂತೆ ನಾವು ಬದುಕಿದ್ದರೆ ಇಂತಹ ಪರಿಸ್ಥಿತಿ ಬರುತ್ತಿತ್ತೇ ಎಂಬ ಪ್ರಶ್ನೆ ಕಾಡುವಂತಾಗಿದೆ.
ಮಾನವರ ಬೇಜವಾಬ್ದಾರಿಯಿಂದ ಅರಣ್ಯ ನಾಶವಷ್ಟೇ ಅಲ್ಲದೆ ಭೂಮಿ, ಜಲ ಮತ್ತು ವಾಯು ಮಲೀನಗೊಂಡಿದೆ. ಮಾನವನ ಶರೀರವು ರೋಗಗಳ ತಾಣವಾಗಿದೆ. ಮನುಷ್ಯರು ಮಾಡಿದ ತಪ್ಪಿನಿಂದ ಇಂದು ಕೊರೊನಾ ವೈರಾಣು ಜೀವ ಹಿಂಡುತ್ತಿದೆ.
ಇದನ್ನೂ ಓದಿ: ಹೊಸಪೇಟೆ: ಹಣ ಪಡೆದು ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ವಿತರಣೆ
ಮಾನವರನ್ನು ಬಿಟ್ಟು ಉಳಿದೆಲ್ಲ ಪ್ರಾಣಿ-ಪಕ್ಷಿಗಳು ಆನಂದದಿಂದ ಇವೆ. ಯಾಕೆಂದರೆ, ಅವು ನಿಸರ್ಗ ನಾಶದ ತಪ್ಪು ಮಾಡಿಲ್ಲ. ಹಾಗಾಗಿ, ನಿಸರ್ಗವು ಮನುಷ್ಯರಿಗೆ ಮಾತ್ರ ಶಿಕ್ಷೆ ನೀಡುತ್ತಿದೆ ಎಂದರು.
ಈಗಲಾದರೂ ಬಸವಣ್ಣನವರ ವಚನದಂತೆ ಬದುಕುವ ಮೂಲಕ ನಿಸರ್ಗ ರಕ್ಷಣೆ ಮಾಡಬೇಕಿದೆ ಎಂದು ಸಂದೇಶ ನೀಡಿ, ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳನ್ನ ತಿಳಿಸಿದ್ದಾರೆ.