ಬಾಗಲಕೋಟೆ: ಹೊರ ರಾಜ್ಯಗಳಿಂದ ಆಗಮಿಸುತ್ತಿರುವವರನ್ನ ಕ್ವಾರಂಟೈನ್ ಮಾಡಲು ಜಿಲ್ಲೆಯ ಎಲ್ಲ ವಸತಿ ನಿಲಯಗಳನ್ನ ಸಿದ್ದಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳ ಪಟ್ಟಿ ಸಲ್ಲಿಸಬೇಕು. ವಸತಿ ನಿಲಯಗಳಲ್ಲಿ ಎಷ್ಟು ಕೊಠಡಿಗಳಿವೆ. ಅಲ್ಲಿ ಎಷ್ಟು ಜನರನ್ನ ಕ್ವಾರಂಟೈನ್ ಮಾಡಲು ಸಾಧ್ಯ ಎಂಬ ಮಾಹಿತಿಯನ್ನ ತುರ್ತಾಗಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ದಿನದಿಂದ ದಿನಕ್ಕೆ ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಬಾಗಲಕೋಟೆಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ಸೋಂಕು ಹೆಚ್ಚಾಗಿರುವ ರಾಜ್ಯದಿಂದ ಬರುವ ವ್ಯಕ್ತಿಗಳನ್ನ ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡುವ ಅಗತ್ಯವಿದೆ. ಮೊದಲು ತಾಲೂಕು ಕೇಂದ್ರದಲ್ಲಿರುವ ವಸತಿ ನಿಲಯಗಳನ್ನ ಸಿದ್ದಗೊಳಿಸಿ, ಅಲ್ಲಿ ಊಟದ ವ್ಯವಸ್ಥೆ ಕೂಡಾ ಮಾಡಬೇಕು. ನಂತರ ಗ್ರಾಮೀಣ ಭಾಗದಲ್ಲಿರುವ ವಸತಿ ನಿಲಯಗಳನ್ನ ಬಳಸಿಕೊಳ್ಳಲಾಗುವುದು ಎಂದರು.
ಹೊರ ರಾಜ್ಯಗಳಿಂದ ಜಿಲ್ಲೆಗೆ ಬುಧವಾರ ಒಟ್ಟು 188 ಜನರು ಬಂದಿದ್ದು, ಮಹಾರಾಷ್ಟ್ರದಿಂದ 121, ಗುಜರಾತ್ನಿಂದ 16, ಗೋವಾದಿಂದ 48, ತೆಲಂಗಾಣದಿಂದ 2 ಹಾಗೂ ಆಂಧ್ರಪ್ರದೇಶದಿಂದ ಒಬ್ಬರು ಆಗಮಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದ್ದಾರೆ.