ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಆಗುತ್ತಿರುವ ಪರಿಣಾಮ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗೆ ನೀರು ನುಗ್ಗಿದ್ದು ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನ ವಿವಿಧ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬು ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮದ ಯಮನಪ್ಪ ಮಲ್ಲಪ್ಪ ಹರಗಿ ತಮ್ಮ 10 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು ಮಳೆ,ಗಾಳಿಗೆ ಸಿಕ್ಕು ಸಂಪೂರ್ಣ ಹಾಳಾಗಿದೆ. ಜೊತೆಗೆ ಗ್ರಾಮದ ರಮೇಶ ಗಗನದ ಎಂಬುವರ ಬೆಳೆ ಸಹ ಹಾಳಾಗಿದ್ದು, ಜಮೀನಿನಲ್ಲಿ ಮೊಳಕಾಲುದ್ದ ನೀರು ನಿಂತು ರೈತರು ತೊಂದರೆ ಅನುಭವಿಸುವಂತಾಗಿದೆ.
ದೀಪಾವಳಿ ಹಬ್ಬದ ನಂತರ ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ದಿನಗಳಿಂದ ನಿರಂತರ ಸುರಿದ ಮಳೆಗೆ ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ. ಇದರ ಜೊತೆಗೆ ರೈತರ ಇತರ ಬೆಳೆಗಳಲ್ಲಿ ಸಹ ಮಳೆ ನೀರು ನಿಂತಿದ್ದು, ಬೆಳೆ ಕೊಳೆಯುವ ಭೀತಿಯಿಂದ ರೈತರು ಆತಂಕಗೊಂಡಿದ್ದಾರೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಮಳೆ - ಗಾಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನು ಹುನಗುಂದ ತಾಲೂಕಿನ ಕಳ್ಳಿಗುಡಿ,ರಾಮಥಾಳ, ಹೂವಿನಹಳ್ಳಿ ಸೇರಿದಂತೆ ಇತರ ಪ್ರದೇಶದಲ್ಲಿ ಸಹ ಬೆಳೆ ಹಾನಿ ಆಗಿದ್ದು, ಈ ಬಗ್ಗೆ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ವಿನಂತಿಸಿಕೊಂಡಿದ್ದಾರೆ.