ಬಾಗಲಕೋಟೆ: ಜಮಖಂಡಿ ಪಟ್ಟಣದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿಯ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಹಾಗೂ ಸ್ಥಳೀಯ ಸಿಪಿಐ ಹಾಗೂ ಡಿವೈಎಸ್ಪಿ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಾಗಲಕೋಟೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಜಮಖಂಡಿ ಪ್ಯಾಲೇಸ್ ಬಳಿ ವಿದ್ಯಾರ್ಥಿನಿ ಸಂಶಯಾಸ್ಪದವಾಗಿ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದು, ಮಾನಸಿಕ ಹಿಂಸೆಯಿಂದ ನೊಂದು ಮೃತಪಟ್ಟಿದ್ದಾಳೆಯೋ ಅಥವಾ ಕೊಲೆ ಮಾಡಲಾಗಿದೆಯೋ ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿ ಪಾಲಕರ ಸಮೇತ ಎಸ್ಪಿ ಕಚೇರಿ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘಟನೆ ಮುಖಂಡರಾದ ಮುತ್ತಣ್ಣ ಬೆಣ್ಣೂರು ಹಾಗೂ ಶಿವಾನಂದ ಟವಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ಸಮಗ್ರ ಮಾಹಿತಿ ಪಡೆದುಕೊಂಡರು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.