ಬಾಗಲಕೋಟೆ: ಅಕ್ಕಸಾಲಿಗರು ಹಾಗೂ ಪತ್ತಾರಿಕೆ ಮಾಡುವವರು ಕೋವಿಡ್ನಿಂದಾಗಿ ದುಡಿಮೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶುಭ ಸಮಾರಂಭಗಳು ಜರುಗುವ ಸಂದರ್ಭಗಳಲ್ಲಿ ಲಾಕ್ಡೌನ್ ವಿಧಿಸಿದ್ದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ. ಆದರೆ, ಈಗ ಆಷಾಢ ಮಾಸ ಆಗಿರುವುದರಿಂದ ಅಂಗಡಿ ಮುಂಗಟ್ಟು ತೆರೆಯಲು ಅನುಮತಿ ನೀಡಿದ್ರೂ ಪ್ರಯೋಜನ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಪತ್ತಾರಿಕೆ ಹಾಗೂ ಅಕ್ಕಸಾಲಿಗ ವೃತ್ತಿ ಅವಲಂಬಿಸಿದ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಂಶ ಪಾರಂಪರ್ಯವಾಗಿ ಇದೇ ವೃತ್ತಿಯನ್ನು ನೆಚ್ಚಿಕೊಂಡವರಿಗೆ ಲಾಕ್ಡೌನ್ ಭಾರಿ ಹೊಡೆತ ನೀಡಿದೆ. ಕೋವಿಡ್ನಿಂದ ಚೇತರಿಸಿಕೊಳ್ಳಲು ಯತ್ನಿಸುತ್ತಿರುವವರಿಗೆ ಆಷಾಢ ಮಾಸ ಅಡ್ಡಿಯಾಗಿದ್ದು, ಮತ್ತಷ್ಟು ಪೆಟ್ಟು ನೀಡಿದೆ.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ವಿವಿಧ ಸಮುದಾಯಗಳಿಗೆ ಪ್ಯಾಕೇಜ್ ಘೋಷಿಸರುವ ಸರ್ಕಾರ, ಇವರಿಗೂ ಪರಿಹಾರ ಘೋಷಿಸಿದೆ. ಆದರೆ, ಆ ಎರಡು ಸಾವಿರ ರೂಪಾಯಿ ನೀಡಲು ಸಾಕಷ್ಟು ದಾಖಲೆ ಕೇಳುತ್ತಿದ್ದಾರಂತೆ ಅಧಿಕಾರಿಗಳು. ಹಾಗಾಗಿ ಸರ್ಕಾರ ನೀಡುವ ಸಹಾಯ ಧನ ನಮಗೆ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಅಕ್ಕಸಾಲಿಗರು.