ಬಾಗಲಕೋಟೆ: ಕಬ್ಬಿಗೆ ಹೋಲಿಸಿದರೆ ಹತ್ತಿ ಬೆಳೆಗೆ ಕಡಿಮೆ ನೀರು ಬೇಕಾಗುತ್ತದೆ. ಬರವನ್ನು ಸಹ ತಕ್ಕಮಟ್ಟಿಗೆ ತಡೆದುಕೊಳ್ಳುವ ಶಕ್ತಿ ಇರುವುದರಿಂದ ಹತ್ತಿಯನ್ನು ಲಾಭದಾಯಕವಾಗಿ ಬೆಳೆಯಬಹುದು ಎಂದು ವಿಜಯಪುರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಹೇಳಿದ್ದಾರೆ.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕ ಡಾ.ಬಿ.ಟಿ.ನಾಡಗೌಡ ಮಾತನಾಡಿ, ಕಬ್ಬಿಗೆ ಪರ್ಯಾಯ ಬೆಳೆಯಾಗಿ ಹತ್ತಿಯನ್ನು ಹಾಗೂ ಪರಿವರ್ತಿತ ಬೆಳೆಯಾಗಿ ಕಬ್ಬಿಗೆ ಬರುವ ಉರಿಮಲ್ಲಿಗೆಯನ್ನು ತಡೆಯುವ ನಿಟ್ಟಿನಲ್ಲಿ ಬೆಳೆದು ರೈತರು ಹೆಚ್ಚಿನ ಉಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಆದ ಡಾ.ಮೌನೇಶ್ವರಿ ಕಮ್ಮಾರ್ ಮಾತನಾಡಿ ಹತ್ತಿ ಮುಂಚೂಣಿಯಲ್ಲಿದ್ದು, ಪ್ರಾತ್ಯಕ್ಷಿಕೆಯ ಉದ್ದೇಶ ಮತ್ತು ಇದರ ಪ್ರಯೋಜನಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಗ್ರಾಮದ ಹಿರಿಯರು ಹಾಗೂ ರೈತರಾದ ಮಲ್ಲಪ್ಪ ಕೌಜಲಗಿ ಮಾತನಾಡಿ, ಹತ್ತಿಯನ್ನು ತಮ್ಮ ಗ್ರಾಮದಲ್ಲಿ ಮೊದಲು ಬೆಳೆಯುತ್ತಿದ್ದು, ಕಾರಣಾಂತರದಿಂದ ಹಾಗೂ ಹವಮಾನದ ವೈಪರೀತ್ಯದಿಂದ ಮತ್ತು ಕಬ್ಬಿಗೆ ಹೆಚ್ಚಿನ ಬೆಲೆ ಇರುವುದರಿಂದ ರೈತರು ಹತ್ತಿ ಬೆಳೆಯವುದನ್ನು ಬಿಟ್ಟು,ಕಬ್ಬು ಬೆಳೆಯಲು ಪ್ರಾರಂಭಿಸಿದರು ಎಂದು ತಿಳಿಸಿದರು. ಕಬ್ಬಿನ ಬದಲಾಗಿ ಹತ್ತಿ ಬೆಳೆಯಲು ವಿಜ್ಞಾನಿಗಳು ರೈತರಿಗೆ ಅನುಕೂಲವಾಗುವಂತೆ ತರಬೇತಿ, ಪ್ರಾತ್ಯಕ್ಷಿಕೆ ಮತ್ತು ಸಂಶೋಧನೆಗಳನ್ನುಕೈಗೊಳ್ಳಬೇಕೆಂದು ಮನವಿಮಾಡಿಕೊಂಡರು.