ಬಾಗಲಕೋಟೆ : ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಬಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಬೃಹತ್ ಸೇಬು ಹಣ್ಣಿನ ಹಾರ ಹಾಕುವ ಮೂಲಕ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಡಿಕೆಶಿಗೆ ಶಾಸಕ ಆನಂದ ನ್ಯಾಮಗೌಡ ಹಾಗೂ ನಲಪಾಡ್ ಸೇರಿದಂತೆ ಇತರ ಪ್ರಮುಖರು ಸಾಥ್ ನೀಡಿದರು.
ಬನ್ನಹಟ್ಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮತ್ತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳೀ ನಡೆಸಿದರು. ಬಿಜೆಪಿ ಪಕ್ಷದವರ ಶಾಸಕಾಂಗ ಸಭೆ ಕರೆದಿದ್ದಾರಲ್ಲ. ಅಧಿವೇಶನ ಕರೆದಿಲ್ಲ. ಬೆಳಗಾವಿಯ ಸುವರ್ಣ ಸೌಧದಲ್ಲಿ ಎರಡು ವರ್ಷದಿಂದ ವಿಧಾನಸಭೆ ಅಧಿವೇಶನ ನಡೆಸಿಲ್ಲ. ಅಲ್ಲಿ ಸುವರ್ಣಸೌಧವನ್ನೆಲ್ಲ ಹೆಗ್ಗಣ ತಿಂತಿವೆ. ಸೀಟ್, ಚೇರ್ ಎಲ್ಲ ಹೆಗ್ಗಣ ತುಂಬಿ ಕುಂತಿದೆ ಎಂದರು.
ಬೆಳಗಾವಿಯಲ್ಲಿ ಬಿಜೆಪಿಯವರು ಅಧಿವೇಶನ ನಡೆಸಲು ಹಿಂದೇಟು ಹಾಕುತ್ತಿದ್ದಾರೆ, ಇದರಿಂದ ಅರ್ಥ ಆಗುತ್ತಿದೆಯಲ್ಲಾ, ಉತ್ತರ ಕರ್ನಾಟಕ ಏನು ಆಯಿತು ಅಂತ. ಆದ್ದರಿಂದ ಸುವರ್ಣ ಸೌಧವನ್ನ ಯಾರಿಗಾದ್ರೂ ಬಾಡಿಗೆ ಕೊಡೋದು ಉತ್ತಮ. ಅಲ್ಲಿ ಏನು ನಡೆಸಲ್ಲ ಎಂದರೆ ಬಾಡಿಗೆನಾದ್ರು ಬರಲಿ ಪಾಪ ಎಂದು ವ್ಯಂಗ್ಯವಾಡಿದರು.
ಬಾದಾಮಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯನವರ ಆಗಮಿಸಿದ ಸಮಯದಲ್ಲಿ ಹೂ ಮಳೆಗೈದು ಸ್ವಾಗತ ಕೋರಿದ್ದ ಸಿದ್ದು ಅಭಿಮಾನಿಗಳು, ಮುಂದಿನ ಸಿಎಂ ಎಂದು ಘೋಷಣೆ ಕೂಗಿ ಸಂಭ್ರಮಪಟ್ಟಿದ್ದರು. ಈಗ ಡಿಕೆಶಿ ಅಭಿಮಾನಿಗಳು ಹೂಮಳೆ ಜೊತೆ ಕ್ರೇನ್ ಮೂಲಕ ಬೃಹತ್ ಗಾತ್ರದ ಸೇಬು ಹಣ್ಣಿನ ಹಾರ ಹಾಕಿ ಘೋಷಣೆ ಕೂಗಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೇಘಾ ನಡುವೆ ವಾಗ್ವಾದ ನಡೆಯಿತು.
ಬನಹಟ್ಟಿ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನೇಕಾರರ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಕೊರೊನಾದಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ. ನಾನು ಬಂದಿರುವುದು ಕೊರೊನಾದಿಂದ ತೊಂದರೆ ಉಂಟಾಗಿರುವ ನೇಕಾರರ ಬದುಕು ತಿಳಿಯಲು. ಆದರೆ, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದರು.
ಇಲ್ಲಿ ಯಾರೂ ಜೈಕಾರ ಹಾಕಬಾರದು, ಯಾವುದೇ ಪಕ್ಷದ ಬಗ್ಗೆ ಮಾತನಾಡಬಾರದು, ಕೇವಲ ನೇಕಾರರ ಸಮಸ್ಯೆಗಳೇನು, ಅವುಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು, ವೃತ್ತಿ ಪರ ಚಿಂತನೆಗಳ ಬಗ್ಗೆ ಮಾತ್ರ ಚರ್ಚೆ ಮಾಡಬೇಕಾಗಿದೆ. ನಿಮ್ಮ ಬೇಡಿಕೆ ಏನು ಎಂಬುದು ತಿಳಿದು, ಅದಕ್ಕೆ ಏನು ಮಾಡಬೇಕು ಎಂದು ಚರ್ಚೆ ನಡೆಸಬೇಕಾಗಿದೆ ಎಂದರು.
ಇದನ್ನೂ ಓದಿ : Unlock 4.O: ನಾಳೆಯಿಂದಲೇ ಥಿಯೇಟರ್ಗಳು ಓಪನ್.. ಪದವಿ ಕಾಲೇಜುಗಳ ಪುನಾರಂಭಕ್ಕೂ ಮುಹೂರ್ತ ಫಿಕ್ಸ್
ಎಲ್ಲೆಲ್ಲೂ ಡಿಕೆಶಿ ಬ್ಯಾನರ್ ರಾಜಾಜಿಸುತ್ತಿದ್ದವು. ಸಿದ್ದರಾಮಯ್ಯ ಕಟೌಟ್ ಕಾಣದ ಹಿನ್ನೆಲೆ ಸಿದ್ದು ಅಭಿಮಾನಿಗಳ ಬೇಸರ ವ್ಯಕ್ತಪಡಿಸಿದರು. ಸಿದ್ದು ಅಭಿಮಾನಿಗಳ ಆಕ್ಷೇಪದ ಬೆನ್ನಲ್ಲೇ ಸಿದ್ದರಾಮಯ್ಯನವರ ಕಟೌಟ್ ನಿಲ್ಲಿಸಲಾಯಿತು.
ಮಾಜಿ ಸಂಸದರಾದ ಜಿ ಮಾದೇಗೌಡರ ಹಾಗೂ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 26 ನೇಕಾರರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ಆರ್. ಪಾಟೀಲ್, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಜಿಲ್ಲೆಯ ಕೆಲ ಮುಖಂಡರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.