ಬಾಗಲಕೋಟೆ: ತೈಲ ಬೆಲೆ ಏರಿಕೆ ಖಂಡಿಸಿ ನಗರದಲ್ಲಿನ ಜಿಲ್ಲಾಡಳಿತ ಭವನದ ಎದುರು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಎಸ್.ಜಿ.ನಂಜಯ್ಯನಮಠ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ ಹಾಗೂ ಆರ್.ಬಿ.ತಿಮ್ಮಾಪೂರ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತ ಸಮಯದಲ್ಲಿ ತೈಲ ಬೆಲೆ ಸುಂಕವನ್ನು ಕೇವಲ 9 ರೂಗಳಷ್ಟು ವಿಧಿಸಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರವು 32.98 ಸುಂಕ ವಿಧಿಸಿದೆ ಇದರಿಂದ ತೈಲ ಬೆಲೆ ಏರಿಕೆ ಆಗುತ್ತಿದ್ದು, ಪ್ರತಿ ನಿತ್ಯ 50 ಪೈಸೆ ಏರಿಕೆ ಮಾಡುವುದರ ಮೂಲಕ ಸಾಮಾನ್ಯ ಜನತೆಗೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕದ ಪತ್ರಿಕೆಯಲ್ಲಿ ಮೋದಿ ವಿರುದ್ದ ಟೀಕೆ ಮಾಡಲಾಗುತ್ತಿದೆ, ಆದರೆ ಭಾರತದಲ್ಲಿ ಮಾತ್ರ ಮೋದಿ ಬಗ್ಗೆ ಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಇನ್ನು ತೈಲ ಬೆಲೆ ಇಳಿಸುವ ಜೊತೆಗೆ ಅಭಿವೃದ್ಧಿ ಪರ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ವಿವಿಧ ಬೇಡಿಕೆ ಇರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.