ಬಾಗಲಕೋಟೆ: ಕಾಂಗ್ರೆಸ್ ಪಕ್ಷದವರು ರಾಹುಲ್ ಬಾಬಾನ ಕರಕೊಂಡು ತಿರುಗಾಡುತ್ತಿದ್ದಾರಲ್ಲ, ನಮ್ಮೂರ ಕಡೆ ಹಿಡಕೊಂಡ ತಿರುಗಾಡುತ್ತಾರೆ, ಏನನ್ನು ಹಿಡಕೊಂಡ ತಿರುಗಾಡುತ್ತಾರೆ ಗೊತ್ತಾ ಎಂದು, ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕರಡಿ ಎಂಬರ್ಥದಲ್ಲಿ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ನಾಯಕರು ಮುಖ ಇಟ್ಟುಕೊಂಡು ಹೋದರೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಹಾಗಾಗಿ ಬಿಜೆಪಿಯವರು ರಾಷ್ಟ್ರೀಯ ಮುಖಂಡರನ್ನು ಕರೆಸುವುದು ಅನಿರ್ವಾಯವಾಗಿದೆ ಎಂಬ ಕಾಂಗ್ರೆಸ್ನವರ ಟೀಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದವರು ರಾಹುಲ್ ಬಾಬಾನ ಕರಕೊಂಡು ತಿರುಗಾಡುತ್ತಿದ್ದಿರಲ್ಲ, ನಿಮಗೆ ಮುಖ ಇಲ್ಲವಾ? ಎಂದು ಪ್ರಶ್ನಿಸಿದರು.
ಬಜೆಟ್ ಎಷ್ಟೋ ಬಾಬಾ ನಿಮ್ಮದು?: ನಾವು ಸಾಧನೆಗಳು, ಕಾರ್ಯಕ್ರಮಗಳ ಮೇಲೆ ಜನರ ವಿಶ್ವಾಸ ಗಳಿಸಿ ಗೆದ್ದು ಬರುತ್ತೇವೆಂಬ ಆತ್ಮವಿಶ್ವಾಸ ನಮಗಿದೆ, ಕಾಂಗ್ರೆಸ್ ನವರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ, ಅದಕ್ಕಾಗಿ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ. 200 ಯುನಿಟ್ ವಿದ್ಯುತ್, ಹೆಣ್ಣುಮಕ್ಕಳ ಖಾತೆಗೆ 2 ಸಾವಿರ ಹಾಕುತ್ತೇವೆ. 2 ಲಕ್ಷ ಕೋಟಿ ನೀರಾವರಿಗೆ ಖರ್ಚು ಮಾಡುತ್ತಿವಿ ಎಂದು ಹೇಳುತ್ತಿದ್ದಾರೆ. ಬಜೆಟ್ ಎಷ್ಟೋ ಬಾಬಾ ನಿಮ್ಮದು?, ಅಬ್ಬಬ್ಬಾ ಎಂದರೆ ಎರಡೂವರೆ ಲಕ್ಷ ಕೋಟಿ. ನೀವು ಪುಕ್ಕಟೆ ಕೊಡುವ ಭರವಸೆ ಕೊಟ್ಟಿದ್ದೀರಲ್ಲ, ಅದಕ್ಕೆ ಐದು ಲಕ್ಷ ಕೋಟಿ ಬಜೆಟ್ ಬೇಕಾಗುತ್ತದೆ. ಹಾಗಾದರೆ ಸರ್ಕಾರ ನಡೆಸುತ್ತಿರೊ, ಸರ್ಕಾರಿ ನೌಕರರಿಗೆ ವೇತನ ಕೊಡುತ್ತಿರೊ, ರಾಜ್ಯದ ಮೇಲಿನ ಸಾಲದ ಹೊರೆ ತೀರಿಸ್ತೀರೋ ಇಲ್ವೋ ಎಂದು ಕಾರಜೋಳ ವ್ಯಂಗ್ಯವಾಡಿದರು.
ರಾಜ್ಯಮಟ್ಟದ ಬಿಜೆಪಿ ನಾಯಕರನ್ನು ಜನ ನಂಬೋದಕ್ಕೆ ಸಿದ್ಧರಿಲ್ಲ, ಅದಕ್ಕೆ ರಾಷ್ಟ್ರೀಯ ನಾಯಕರು ಮೇಲಿಂದ ಮೇಲೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಕಾರಜೋಳ, ರಾಜ್ಯದ ಜನರು ನಮ್ಮ ಮೇಲೆ ನಂಬಿದಲ್ಲೇ ನಾವು ನಂ,1 ಪಾರ್ಟಿ ಆಗಿದ್ದೇವೆ. ನಂಬಿದಲ್ಲೇ ನಾವು 104 ಸ್ಥಾನ ಗೆದ್ದೀವಿ. ಕೆಲವು ತಾಂತ್ರಿಕ ಕಾರಣಗಳಿಂದ ನಮಗೆ ಏಳೆಂಟು ಸೀಟ್ ಕಡಿಮೆಯಾಗಿದ್ದು, ಕಡಿಮೆಯಾಗಲಿಕ್ಕೆ ಕಾರಣ ನಮ್ಮ ಇಂಟರ್ನಲ್ ಪ್ರಾಬ್ಲಮ್ ಗಳಾಗಿವೆ. ನಾವು ಅಭ್ಯರ್ಥಿಗಳ ಆಯ್ಕೆ ವೇಳೆ ಸರಿಯಾಗಿ ಪರಿಶೀಲನೆ ಮಾಡದ್ದಕ್ಕೆ ಕೆಲ ತಪ್ಪುಗಳಿಂದ ಸೀಟ್ ಕಡಿಮೆ ಆದವು. ಇಲ್ಲದಿದ್ದರೇ ಚುನಾವಣೆಯಲ್ಲಿ 120 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತಿದ್ದೆವು ಎಂದು ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕರುಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಿರುವ ವಿಚಾರವಾಗಿ ಮಾತನಾಡಿದ ಕಾರಜೋಳ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು, ಬೇರೆ ಏನು ಸಾಧನೆ ಮಾಡಿದ್ದೀರಿ, ಜನ ಯಾಕೆ ನಿಮ್ಮನ್ನು ತಿರಸ್ಕಾರ ಮಾಡಿದ್ದರು ಅನ್ನೋದಕ್ಕೆ ಉತ್ತರ ಕೊಡಿ, ನೀವು ದೊಡ್ಡ ಸಾಧನೆ ಮಾಡಿದ್ದರೆ ಜನ ಇಷ್ಟೇಕೆ ಹೀನಾಯವಾಗಿ ತಿರಸ್ಕಾರ ಮಾಡಿದರು ಮೊದಲು ಅದನ್ನು ಹೇಳಿ ಎಂದು ಸವಾಲು ಹಾಕಿದರು.
ಈ ಸಾರಿ ಕೇರಳದವರು ರಾಹುಲ್ ಗಾಂಧಿಗೆ ವೋಟ್ ಹಾಕಲ್ಲ: ಸಿದ್ದರಾಮಯ್ಯನಂತಹ ರಾಜ್ಯ ನಾಯಕರು ಕ್ಷೇತ್ರ ಹುಡುಕಾಟ ಮಾಡ್ತಿದ್ದಾರೆ ಎಂಬ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾರಜೋಳ ಅವರು, ಸಿದ್ದರಾಮಯ್ಯ ಅಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾತ, ಮುತ್ತಾತ ಗೆದ್ದಿದ್ದ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿದ್ದಾರೆ. ಓಡಿಬಂದು ಕೇರಳದಲ್ಲಿ ನೆಲೆ ಕಂಡುಕೊಂಡ ಈ ಬಾರಿ ಕೇರಳದವರು ಸಹ ರಾಹುಲ್ ಗಾಂಧಿಗೆ ವೋಟ್ ಹಾಕಲ್ಲ. ಈ ಬಾರಿ ರಾಹುಲ್ ಗಾಂಧಿ ಮುತ್ಯಾ ಕಟ್ಟಿಸಿದ ಮನೆಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಜನರನ್ನು ಮರಳು ಮಾಡಲು ಸುಳ್ಳು ಆರೋಪ ಮಾಡುವುದು ಮಾಡುತ್ತಿದ್ದಾರೆ: ಕ್ಷೇತ್ರ ಹುಡುಕಾಟದಲ್ಲಿ ಸಿದ್ದರಾಮಯ್ಯ ಅಲೆಮಾರಿಯಾಗಿದ್ದಾರೆ ಎಂಬ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸತ್ಯದ ಅರ್ಥ ಆಗಿದೆ. ಜನರನ್ನು ಮರಳು ಮಾಡಲು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಭವಾನಿ ರೇವಣ್ಣ ಅವರಿಗೆ ಸಿ ಟಿ ರವಿ ಟಿಕೆಟ್ ಕೊಡುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷ ನಿಂತ ನೀರಲ್ಲ, ನಮ್ಮದು ಹರಿಯುವ ನೀರು, ಹರಿಯುವ ನೀರಿಗೆ ಹೊಸ ನೀರು ಬಂದು ಸೇರಿಕೊಂಡರೆ ಸ್ವಾಗತ ಮಾಡುತ್ತೇವೆ ಎಂದು ಪರೋಕ್ಷವಾಗಿ ಭವಾನಿ ರೇವಣ್ಣ ಬಂದರೆ ಪಕ್ಷಕ್ಕೆ ಸ್ವಾಗತ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಇದನ್ನೂ ಓದಿ:ಭವಾನಿ ರೇವಣ್ಣ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದು ತಮಾಷೆಗೆ, ಬಂದು ಟಿಕೆಟ್ ಕೇಳಬೇಡಿ: ಸಿ.ಟಿ ರವಿ