ಬಾಗಲಕೋಟೆ: ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಆಗಿರುವ ಹಿನ್ನೆಲೆ ಮಾರುಕಟ್ಟೆ ಸೇರಿದಂತೆ ಮಕ್ಕಳ ಆಟ, ಪಾಠ ಎಲ್ಲ ಬಂದ್ ಆಗಿತ್ತು. ಈ ಹಿನ್ನೆಲೆ ರಾಜ್ಯದ ವುಶು ಕ್ರೀಡಾ ಸಂಘಟನೆಯಿಂದ ಆನ್ಲೈನ್ನಲ್ಲೇ ಕ್ರೀಡಾಪಟುಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೇ. 1 ರಿಂದ 3 ರವರೆಗೆ ನಡೆಯಲಿರುವ ಆನ್ಲೈನ್ ವುಶು ಕ್ರೀಡಾ ಸ್ಪರ್ಧೆಗೆ ಶಾಸಕರಾದ ವೀರಣ್ಣ ಚರಂತಿಮಠ ಚಾಲನೆ ನೀಡಿದ್ದರು. ಮನೆಯಲ್ಲಿದ್ದು ಸ್ಟಂಟ್, ಆ್ಯಕ್ಷನ್, ಥಾವುಲು ಸ್ಪರ್ಧೆಗೆ ಝೂಮ್ ಆ್ಯಪ್ ಮೂಲಕ 10 ಜಿಲ್ಲೆಯ 150 ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ಬಾಗಲಕೋಟೆ ಜಿಲ್ಲೆ 26 ಬಂಗಾರ, 17 ಬೆಳ್ಳಿ, 10 ಕಂಚಿನ ಪದಕ ಪಡೆದು ಪ್ರಥಮ ಸ್ಥಾನ ಪಡೆಯಿತು.
ಬೆಂಗಳೂರು ದಕ್ಷಿಣ 10 ಬಂಗಾರ, 4 ಬೆಳ್ಳಿ, 1 ಕಂಚಿನ ಪದಕ ಪಡೆದು ಎರಡನೇ ಸ್ಥಾನ ಪಡೆದಿದೆ. ಬೆಂಗಳೂರು ಮಹಾನಗರ 10 ಬಂಗಾರ, 3 ಬೆಳ್ಳಿ, 1 ಕಂಚಿನ ಪದಕ ಪಡೆದು ಮೂರನೇಯ ಸ್ಥಾನ ಪಡೆದಿದೆ. ಶಿವಮೊಗ್ಗ ಜಿಲ್ಲೆ 7 ಬಂಗಾರ, 5 ಬೆಳ್ಳಿ, 7 ಕಂಚಿನ ಪದಕ ಪಡೆದಿದೆ. ಇದರಲ್ಲಿ ತೀರ್ಪುಗಾರರಾಗಿ ಅಶೋಕಾ ಮೊಕಾಶಿ, ಸಂಗಮೇಶ ಲಾಯದಗುಂದಿ ಮತ್ತು ಕೀರ್ತಿ ಪ್ರಸಾದ ಭಾಗವಹಿಸಿದ್ದರು.
ರಾಜ್ಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಕ್ರೀಡಾ ಪಟುಗಳು ಮುಂದೆ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಲಾಕ್ಡೌನ್ ಮಧ್ಯೆಯೂ ಇಂತಹ ಕ್ರೀಡೆಯನ್ನು ಆಯೋಜಿಸಿರುವುದು ಸಂಘಟನೆ ಕಾರ್ಯ ಶ್ಲಾಘನೀಯವಾಗಿದೆ.