ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಆಡಳಿತಾತ್ಮಕವಾಗಿ ಸಿಎಂ ಬಸವರಾಜ ಬೊಮ್ಮಾಯಿ ಜನವರಿ 14 ರಂದೇ ಘೋಷಣೆ ಮಾಡಿದರೂ ಮಾಡಬಹುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಕೂಡಲ ಸಂಗಮ ಪೀಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬರುವ ಜನವರಿ 14ಕ್ಕೆ ಮೀಸಲಾತಿ ಪಾದಯಾತ್ರೆ ಹೋರಾಟಕ್ಕೆ ಒಂದು ವರ್ಷ ಗತಿಸುತ್ತಿದ್ದು, ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2ಎ ಮೀಸಲಾತಿ ಪಾದಯಾತ್ರೆ ಹೋರಾಟದ ವರ್ಷಾಚರಣೆ ನೆನಪಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಬೃಹತ್ ಹೋರಾಟದ ಕಾರ್ಯಕ್ರಮ ಮಾಡುತ್ತಿದ್ದೇವೆ. ಜನವರಿ 14 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಕೂಡಲ ಸಂಗಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರ್ತೇವೆ ಎಂದು ಅವರೇ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ: ಕೊರೊನಾ ತಡೆಗಟ್ಟಲು ಮತ್ತೆ ಫೀಲ್ಡ್ಗಿಳಿದ ಪೊಲೀಸರು
ರಾಜ್ಯಾದ್ಯಂತ ನಡೆದ ಹೋರಾಟದ ಕಾವು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಗುಲಿದೆ. ನಾವು ಚುನಾವಣೆ ರಾಜಕಾರಣ ಮತ್ತು ಮೀಸಲಾತಿ ಹೋರಾಟವನ್ನು ತಳುಕು ಹಾಕುವ ಪ್ರಯತ್ನ ಮಾಡಿಲ್ಲ. ಸಮಾಜ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿತ್ತು, ಆದ್ರೆ ಮೀಸಲಾತಿ ನಿಧಾನಗತಿಯಾಗಿದ್ದಕ್ಕೆ ಸರ್ಕಾರಕ್ಕೆ ಹೇಗೆ ಹಿನ್ನಡೆ ಆಗಿದೆ ಅನ್ನೋದನ್ನು ಮಾಧ್ಯಮಗಳಲ್ಲಿ ವಿಶ್ಲೇಷಣೆ ಆಗಿದೆ ಎಂದರು.