ಬಾಗಲಕೋಟೆ : ರಾಹುಲ್ ಗಾಂಧಿಯವರಿಂದಲೇ ಮೂರು ಸಾವಿರ ರೂಪಾಯಿಗಳ ನಿರುದ್ಯೋಗ ಭತ್ಯೆ ಪ್ರಾರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಹುನಗುಂದ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯ ಬಗ್ಗೆ ರಾಜಸ್ಥಾನದಲ್ಲಿ ಹೇಳಿದ್ರು. ಛತ್ತೀಸ್ಘಡದಲ್ಲಿ ಹೇಳಿದ್ರು. ಆದರೆ ಅಲ್ಲಿ ಅನುಷ್ಠಾನ ಆಗಲಿಲ್ಲ. ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಇಂಟರ್ನಲ್ ಸರ್ವೆ ರಿಪೋರ್ಟ್ನಲ್ಲಿ ಸೋಲುತ್ತಾರೆ ಅಂತ ಕಾಂಗ್ರೆಸ್ ಪಕ್ಷದವರಿಗೆ ಗೊತ್ತಾಗಿದೆ. ಮೂರ್ನಾಲ್ಕು ಪರ್ಸೆಂಟ್ ಓಟುಗಳು ವಿನ್ ಆಗಬೇಕೆಂದು ಈ ರೀತಿ ಮಾಡ್ತಾ ಇದ್ದಾರೆ. ಆದರೆ, ಕರ್ನಾಟಕದ ಜನ ಬಹಳ ಪ್ರಬುದ್ಧರಿದ್ದಾರೆ. ಕಾಂಗ್ರೆಸ್ಸಿಗರ ಗ್ಯಾರಂಟಿಗಳು ಬೋಗಸ್ ಗ್ಯಾರಂಟಿ ಎಂದು ಟೀಕೆ ಮಾಡಿದರು.
ನಮ್ಮ ಕೆಲಸಗಳು ನಮ್ಮ ಗ್ಯಾರಂಟಿ. ನಮ್ಮ ಕೆಲಸಗಳು ಮಾತಾಡಬೇಕು. ಅವೇ ನಮ್ಮ ಗ್ಯಾರಂಟಿ ಘೋಷಣೆಗಳು. ಕಾಂಗ್ರೆಸ್ಸಿನ ಗ್ಯಾರಂಟಿಗಳು ಬೋಗಸ್ ಗ್ಯಾರಂಟಿಗಳು. ಈ ಹಿಂದೆ ನಾವು ಮಾಡಿದ ಕೆಲಸಗಳೇ ನಮ್ಮ ಗ್ಯಾರಂಟಿ. ಈ ಹಿಂದೆ ಮಾಡಿದ ಕೆಲಸಗಳನ್ನು ಲೋಕಾರ್ಪಣೆಗೊಳಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಾಂಗ್ರೆಸ್ ಗ್ಯಾರಂಟಿಗಳು ಯಾಮಾರಿಸುವಂತವು- ಸಿಎಂ : ಇದೇ ಸಮಯದಲ್ಲಿ ಬೋಗಸ್ ಗ್ಯಾರಂಟಿ ಅಂದ್ರೆ ಯಾವುವು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನೀವು ದಿನಾ ನೀವು ನಾವು ನೋಡುವಂತಹವುಗಳೇ. ನನ್ನ ಬಾಯಿಂದ ಹೇಳುವಷ್ಟು ಅವು ಮಹತ್ವದ್ದಲ್ಲ. ಮಹಿಳೆಯರಿಗೆ, ಯುವಕರಿಗೆ ಯಾಮಾರಿಸುವಂತಹ ಗ್ಯಾರಂಟಿಗಳು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಎಂ ಹರಿಹಾಯ್ದರು.
ಈ ಬಾರಿ ಸಚಿವ ಸಂಪುಟದಲ್ಲಿ ಪಂಚಮಸಾಲಿಗಳಿಗೆ ಸಿಹಿ ಸುದ್ದಿ ಕೊಡ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬರುವ ದಿನಾಂಕ 24ಕ್ಕೆ ಸಚಿವ ಸಂಪುಟ ಸಭೆ ಇದೆ. ಅದಾದ ಬಳಿಕ ನಿಮಗೆ ಗೊತ್ತಾಗುತ್ತೆ ಎಂದರು. ಇದೇ ಸಮಯದಲ್ಲಿ ಬಾದಾಮಿ ತಾಲೂಕಿನ ಹಲಕುರ್ಕಿ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ನಂತರ ಹುನಗುಂದ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಾಸಕ ವೀರಣ್ಣ ಚರಂತಿಮಠ ಹಾಗೂ ದೊಡ್ಡನಗೌಡ ಪಾಟೀಲ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಡೆಯಲಾರದ ನಾಣ್ಯ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನಡೆಯಲಾರದ ನಾಣ್ಯ ಎಂದು ಜಲಸಂಪನ್ಮೂಲಗಳ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಅವರು ಹುನಗುಂದ ಪಟ್ಟಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸುವ ಮುಂಚೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಸೋಲಿನ ಭೀತಿಯಿಂದ ಸುಳ್ಳು ಭರವಸೆಗಳನ್ನ ಕೊಡುತ್ತಿದ್ದಾರೆ. ಅದು ಏನು ರಿಸರ್ವ್ ಬ್ಯಾಂಕ್ನ ಗವರ್ನರ್ ಪ್ರಾಮೀಸ್ ಮಾಡಿದ ಗ್ಯಾರಂಟಿ ಕಾರ್ಡ್ ಅಲ್ಲ. ಕಾಂಗ್ರೆಸ್ ಪಕ್ಷ ನಲವತ್ತು ವರ್ಷದ ಹಿಂದೆ ಗರೀಬಿ ಹಠಾವೋ ಅಂತ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದು. ಗರೀಬಿ ಹಠಾವೋ ಆಗಲಿಲ್ಲ. ಬಡತನ ನಿರ್ಮೂಲನೆ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನವರು ಕ್ಷೇತ್ರ ಹುಡುಕಾಡುವುದಕ್ಕೆ ಅಲೆದಾಡುತ್ತಿದ್ದಾರೆ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಅನ್ನು ಜನರು ನಂಬುತ್ತಿಲ್ಲ. ಅವರ ಕಾರ್ಯಕ್ರಮಗಳಿಗೆ ಜನರು ಬರುತ್ತಿಲ್ಲ. ಐದುನೂರು ರೂಪಾಯಿಕೊಟ್ಟು ಜನರನ್ನ ಕರೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿ ಹೆಚ್ಚಾದ್ದರಿಂದ ದಕ್ಷಿಣದಿಂದ ಉತ್ತರಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಕ್ಷೇತ್ರ ಹುಡುಕಾಡುವುದಕ್ಕೆ ಅಲೆದಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಜನ ಬಿಜೆಪಿ ಕಡೆ ನೋಡುತ್ತಿದ್ದಾರೆ: ಈ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಸೋಲು ಶತಸಿದ್ಧ. ಬಹಳ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಜನ ಬಿಜೆಪಿ ಕಡೆ ನೋಡ್ತಾ ಇದ್ದಾರೆ. ನಾವು 140 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕಾರಜೋಳ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಮಯ ವೈಎಸ್ವಿ ದತ್ತ ಅವರು ಕಾಂಗ್ರೆಸ್ ಪಕ್ಷಕ್ಕೆ ಡಿ ಕೆ ಶಿವಕುಮಾರ್ ಹೊರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ಅವರು ಹೇಳಿದ್ದು ಸತ್ಯ. ಅವರು ಕಾಂಗ್ರೆಸ್ ಪಕ್ಷಕ್ಕೆ ಹೊರೆ ಎಂದು ಹೇಳಿರುವುದು ಸತ್ಯ ಎಂದು ವ್ಯಂಗ್ಯವಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಬಾಬುರಾವ್ ಚಿಂಚನಸೂರು ಪಕ್ಷ ತ್ಯಜಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಬರ್ತಾರೆ ಹೋಗ್ತಾರೆ. ಏನೂ ಆಗುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಇದನ್ನೂ ಓದಿ : ಸೋಮಣ್ಣ ಪಕ್ಷ ಬಿಡಲ್ಲ, ಚಿಂಚನಸೂರ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ: ಕಂದಾಯ ಸಚಿವ ಅಶೋಕ್