ಬಾಗಲಕೋಟೆ: ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ವದಂತಿ ನಂಬಿ ಅಮಾಯಕರ ಮೇಲೆ ದಾಳಿ ನಡೆಸುತ್ತಿರುವ ಪ್ರಸಂಗಗಳು ಪದೇ ಪದೇ ಪುನರಾವರ್ತನೆಯಾಗುತ್ತಲೇ ಇವೆ. ಕಾರಿನಲ್ಲಿ ಪ್ರಿಯತಮೆ ನೋಡಲು ಹೋದ ಯುವಕರನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಬೆನ್ನಟ್ಟಿದ ಗ್ರಾಮಸ್ಥರು ಯುವಕರಿಗೆ ಥಳಿಸಿ ಬಳಿಕ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಬಾಗಲಕೋಟೆ ನಿವಾಸಿಯಾಗಿರುವ ರಾಹುಲ್ ಹಾಗೂ ಕಿರಣ ಎಂಬ ಯುವಕರು ಮುಧೋಳ ತಾಲೂಕಿನಲ್ಲಿರುವ ಕೆ.ಡಿ ಬುದ್ನಿ ಗ್ರಾಮದಲ್ಲಿರುವ ಪ್ರಿಯತಮೆ ನೋಡಲು ಕೆಎ-25 ಎಂಸಿ- 2832 ನಂಬರ್ನ ಕಾರಿನಲ್ಲಿ ಹೋಗಿದ್ದಾರೆ. ಕಪ್ಪು ಬಣ್ಣದ ಕಾರು ಇದಾಗಿದ್ದು, ಗ್ರಾಮದ ಪ್ರಮುಖ ರಸ್ತೆಯಲ್ಲಿ ಎರಡರಿಂದ ಮೂರು ಭಾರಿ ಸಂಚರಿಸಿದ್ದಾರೆ. ಬಳಿಕ ಸ್ಥಳೀಯ ಪಾನ್ ಶಾಪ್ನಲ್ಲಿ ಸಿಗರೇಟ್ ಹಚ್ಚಿಕೊಂಡು ಗ್ರಾಮದಲ್ಲಿ ತಿರುಗಾಡಿದ್ದಾರೆ. ಗ್ರಾಮದ ಜನತೆ ಸಂಶಯದ ದೃಷ್ಟಿಯಿಂದ ನೋಡುತ್ತಾ ಕೇಳಲು ಮುಂದಾಗಿದ್ದಾರೆ. ಹಲವರು ಸೇರಿಕೊಂಡು ಯುವಕರ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಯುವಕರು ಕಾರು ಹತ್ತಿ ವೇಗವಾಗಿ ಚಲಾಯಿಸಿಕೊಂಡು ಹೂರಟಿದ್ದಾರೆ.
ಇದನ್ನೂ ಓದಿ: ಮಕ್ಕಳ ಕಳ್ಳನೆಂದು ಭಾವಿಸಿ ಖಾವಿ ವೇಷಧಾರಿಗೆ ಸಾರ್ವಜನಿಕರಿಂದ ಥಳಿತ
ಆಗ ಕೆಲವರು ಮಕ್ಕಳ ಕಳ್ಳರು ಇರಬಹುದು ಎಂದು ಕೂಗುತ್ತಾ ಕಾರಿನ ಮೇಲೆ ಕಲ್ಲು ಎಸೆದು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಯುವಕರು ಭಯದಿಂದ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೊರಟಿದ್ದಾರೆ. ಮುಂದಿನ ಗ್ರಾಮದಲ್ಲಿ ಇರುವ ಗೆಳಯರನ್ನು ಸಂಬಂಧಿಕರನ್ನು ಕಾರು ತಡೆಯಲು ಮೊಬೈಲ್ ಮೂಲಕ ಮಾಹಿತಿ ನೀಡಿದ್ದಾರೆ. ಆ ಗ್ರಾಮದಲ್ಲಿ ಸಹ ಗುಂಪು ಸೇರುವ ಒಳಗೆ ಗ್ರಾಮದಿಂದ ಪರಾರಿಯಾಗಿದ್ದಾರೆ.
ಕಾರಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು: ಒಂದೊಂದು ಗ್ರಾಮದ ಮೂಲಕ ಅತಿ ವೇಗವಾಗಿ ಸಾಗುತ್ತಾ ಕೊನೆಗೆ ಖಜ್ಜಿಡೋಣಿಗೆ ಬಂದಾಗ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿಕೊಂಡು ಕಾರು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗ ಅಲ್ಲಿ ಸೇರಿದ್ದ ಜನತೆ ಯುವಕರನ್ನು ಥಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಗೊಂಡ ಯುವಕರನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಿದ್ದಾರೆ. ಇತ್ತ ಕಡೆ ಆಕ್ರೋಶಗೊಂಡ ಜನರು ಹಾಗೂ ಕೆಲ ಕೀಡಿಗೇಡಿಗಳು ಕಾರನ್ನು ಜಖಂಗೊಳಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. "ಇಬ್ಬರು ಯುವಕರು ಬಾಗಲಕೋಟೆ ನಿವಾಸಿಗಳಾಗಿದ್ದು, ಬೇರೆ ರಾಜ್ಯದವರಲ್ಲ. ಮಕ್ಕಳ ಕಳ್ಳರು ಎಂದು ತಪ್ಪು ಭಾವನೆಯಿಂದ ಇಷ್ಟೊಂದು ರಾದ್ದಾಂತವಾಗಿದೆ. ಈಗಾಗಲೇ ಕಲಾದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಕಳ್ಳರೆಂಬ ವದಂತಿ: ಅಮಾಯಕ ತಂದೆ-ಮಗನಿಗೆ ಥಳಿಸಿದ ಸ್ಥಳೀಯರು