ಬಾಗಲಕೋಟೆ: ನವರಾತ್ರಿ ಹಬ್ಬವನ್ನು ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಬಾಗಲಕೋಟೆಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಆಚರಿಸುವ ಹಬ್ಬ ವಿಶೇಷವಾಗಿದೆ.
ದಸರಾ ಅಂಗವಾಗಿ ಕಳೆದ ಕೆಲವು ವರ್ಷಗಳಿಂದ ಬಾಗಲಕೋಟೆಯ ಎಸ್ಎಸ್ಕೆ ಸಮಾಜ ಜಗದಂಬಾ ದೇವಿಗೆ ವಿಶೇಷ ಪೂಜೆ, ಪುನಸ್ಕಾರ ಮಾಡಿಕೊಂಡು ಬಂದಿದ್ದಾರೆ. ಅಷ್ಟಮಿಯ ದಿನ ದೇವಿಗೆ 'ಛಪ್ಪನ್ ಭೋಗ' ಎಂಬ ವಿಶೇಷ ಪೂಜೆ ಮಾಡುವ ಮೂಲಕ ಗಮನ ಸೆಳೆಯುತ್ತಾರೆ.
'ಛಪ್ಪನ್ ಭೋಗ' ಎಂದರೇನು?
ಛಪ್ಪನ್ ಭೋಗ ಅಂದ್ರೆ 56 ಬಗೆಯ ತಿಂಡಿ-ತಿನಿಸುಗಳನ್ನು ದೇವಿಗೆ ನೈವೇದ್ಯ ರೂಪದಲ್ಲಿ ಸಮರ್ಪಣೆ ಮಾಡಿ, ಪ್ರಾರ್ಥನೆ ಸಲ್ಲಿಸುವುದು. ಭಕ್ತರು ತಂದಿರುವ ಸಿಹಿತಿಂಡಿ ಪದಾರ್ಥಗಳು, ಹಣ್ಣು, ಹಂಪಲ, ಗೋಡಂಬಿ, ದಾಕ್ಷಿ, ಮೈಸೂರು ಪಾಕ್, ಜಿಲೇಬಿ ಸೇರಿದಂತೆ ನಾನಾ ಬಗೆಯ ಪದಾರ್ಥಗಳನ್ನು ಒಂದೆಡೆ ಇಟ್ಟು ಸಮಾಜ ಬಾಂಧವರು ಹಾಗೂ ಇತರರು ದೇವಿಗೆ ಮಹಾ ಮಂಗಳಾರತಿ ನೇರವೇರಿಸುತ್ತಾರೆ. ನಂತರ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡುತ್ತಾರೆ.
ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಪೂಜೆ ಮಾಡಲಾಗಿತ್ತು. ಆದರೆ ಈ ಬಾರಿ ಛಪ್ಪನ್ ಭೋಗ ಪೂಜೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗಿದೆ. ಪ್ರತಿ ವರ್ಷ ದಸರಾ ಅಷ್ಟಮಿ ದಿನದಂದು ಹೀಗೆ ಪೂಜೆ ಪುನಸ್ಕಾರ ಮಾಡುವುದು ಈ ಸಮಾಜದ ಸಂಪ್ರದಾಯ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಗದಂಬಾ ದೇವಿಗೆ ಭಕ್ತಿಯಿಂದ ಪೂಜೆ ಮಾಡಿದರೆ, ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬುದು ಭಕ್ತರ ನಂಬಿಕೆ.