ಬಾಗಲಕೋಟೆ : ನೆರೆ ಪೀಡಿತ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪ್ರವಾಹದ ನೀರಿನಲ್ಲಿ ಬಿದ್ದಿದೆ. ಹಿಪ್ಪರಗಿ ಬ್ಯಾರೇಜ್ನಲ್ಲಿ ಅವಘಡ ಸಂಭವಿಸಿದ್ದು, ಅಪಾಯದಲ್ಲಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ.
ಪ್ರವಾಹದ ನೀರಲ್ಲಿ ಮುಳುಗುತ್ತಿದ್ದ ಏಳು ಜನರನ್ನು ಜಮಖಂಡಿ ಕೃಷಿ ಇಲಾಖೆ ವಾಹನ ಚಾಲಕ ವಿನೋದರೆಡ್ಡಿ ಬರಗಿ ಕಾಪಾಡಿದ್ದಾರೆ. ಕೃಷಿ ಅಧಿಕಾರಿಗಳು ಹಿಪ್ಪರಗಿಯಿಂದ ಜಮಖಂಡಿಗೆ ಪ್ರಯಾಣಿಸುತ್ತಿದ್ದಾಗ ಕಣ್ಣ ಮುಂದೆಯೇ ಅವಘಡ ಸಂಭವಿಸಿದೆ. ಕೂಡಲೇ ರಕ್ಷಣೆಗೆ ಇಳಿದ ಕೃಷಿ ಇಲಾಖೆ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಿದೆ.
ಬೊಲೆರೊ ವಾಹನದಲ್ಲಿದ್ದ ಏಳು ಮಂದಿ ಮಹಾರಾಷ್ಟ್ರ ಮೂಲದವರು ಎನ್ನಲಾಗುತ್ತಿದೆ. ಜಮಖಂಡಿಯಿಂದ ಮಹಾರಾಷ್ಟ್ರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಸದ್ಯ ವಾಹನದಲ್ಲಿದ್ದ ಏಳೂ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.