ಬಾಗಲಕೋಟೆ : ಬಿಜೆಪಿಯವರಿಗೆ ನನ್ನನ್ನು ಕಂಡರೆ ಭಯ, ಯಾರನ್ನು ಕಂಡ್ರೆ ಭಯವೋ ಅವರನ್ನೇ ಜಾಸ್ತಿ ನೆನಪಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಾಗಲಕೋಟೆ ನಗರಕ್ಕೆ ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಅವರಿಗೆ ಭಯ ಇರೋದ್ರಿಂದ ಹಾಗೆ ಮಾತನಾಡ್ತಾರೆ, ಮಾತಾಡಲಿ, ಅವ್ರದ್ದು ಕೋಮುವಾದಿ ಪಕ್ಷ. ನಾನು ಒಬ್ಬ ಮಾತನಾಡಿದ್ರೆ ಅವ್ರ ಇಪ್ಪತ್ತು ಜನ ಮೈ ಮೇಲೆ ಬೀಳುತ್ತಾರೆ ಎಂದು ಹೇಳಿದರು.
ರಾಜ್ಯಸಭಾ ಎರಡನೇ ಅಭ್ಯರ್ಥಿ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ನಾವು ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಜೆಡಿಎಸ್ಗಿಂತ ಮೊದಲು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದೇವೆ. ಬೇರೆ ಪಕ್ಷ ಗೆಲ್ಲಬಾರದು ಅನ್ನೋದಾದರೆ ನಮ್ಮನ್ನು ಬೆಂಬಲಿಸಬೇಕು ಎಂದು ಹೇಳಿದರು.
ಬಿಎಸ್ವೈ ಹಾಗೂ ಸಿದ್ದರಾಮಯ್ಯ ಏರ್ಪೋರ್ಟ್ ನಲ್ಲಿ ಭೇಟಿಯಾದ ವಿಚಾರವಾಗಿ ಮಾತನಾಡಿದ ಅವರು, ವೈಯ್ಯಕ್ತಿಕ ಸಂಬಂಧಗಳು ಬೇರೆ, ರಾಜಕೀಯ ಸಂಬಂಧಗಳು ಬೇರೆ. ನಾವು ಸಿದ್ಧಾಂತದ ಮೇಲೆ ರಾಜಕೀಯ ಮಾಡೋರು. ಈ ದೇಶಕ್ಕೆ ಏನು ಸಿದ್ಧಾಂತ ಬೇಕೋ ಆ ರಾಜಕೀಯ ಮಾಡುತ್ತೇವೆ. ಬಹು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಕೊಂಡವರು ನಾವು, ಬಹು ಜನರ ಕಲ್ಯಾಣವೇ ದೇಶದ ಕಲ್ಯಾಣ ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು ಹೇಳಿದರು.
ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಉಸಿರಾಡ್ತಿದೆ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಪ, ಅವರನ್ನು ಮುಖ್ಯಮಂತ್ರಿಯಿಂದ ತೆಗೆದುಬಿಟ್ಟರು, ಏನ್ ಮಾತಾಡಿ, ಏನ್ ಮಾಡ್ತಾರೆ ಅವರು. ವಯಸ್ಸು ಆಯ್ತು ಅಂತಾ ಅವರನ್ನು ಮುಖ್ಯಮಂತ್ರಿ ಸ್ಥಾನ ತೆಗೆದುಬಿಟ್ಟಿದ್ದಾರೆ. ಅವರ ಮಗನನ್ನು ಎಂ.ಎಲ್.ಸಿ ಮಾಡಲಿಲ್ಲ, ಹಂಗೇ ಹೇಳ್ತಿದ್ದಾರೆ. ನಾನು ಬಿಎಸ್ವೈ ಗೆ ವಯ್ಯಸ್ಸಾಯ್ತು ಅಂತಾ ಹೇಳಲ್ಲ ಎಂದು ವ್ಯಂಗ್ಯವಾಡಿದರು.
ಚಡ್ಡಿ ಸುಡೋದು ಅಂದರೆ ಆರ್ ಎಸ್ ಎಸ್ ಸಿದ್ಧಾಂತ ಸುಡೋದು ಅಂತ ಅರ್ಥ : ಆರ್.ಎಸ್.ಎಸ್ ಬಗ್ಗೆ ಸಿದ್ದರಾಮಯ್ಯ ಪುಂಡ ಪೋಕರಿಗಳ ರೀತಿ ಮಾತಾಡಬಾರದು ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಬಹಳ ಜವಾಬ್ದಾರಿಯುತ ವ್ಯಕ್ತಿಯಾಗಿ ಹೇಳುತ್ತಿರೋದು. ನಾನು ಏನು ಹೇಳಿದೆ ಹೇಳಿ,ಆರ್ ಎಸ್ ಎಸ್ ಚಡ್ಡಿ ಸುಡೋದು ಅಂದರೆ ಆರ್ ಎಸ್ ಎಸ್ ಸಿದ್ಧಾಂತ ಸುಡೋದು ಅಂತ ಅರ್ಥ.
ಪಠ್ಯಪುಸ್ತಕ ಬಗ್ಗೆ ಕೇಳಿದ್ರಿ, ನೇಮಕ ಮಾಡಿರೋದು ಯಾರನ್ನು ರೋಹಿತ್ ಚಕ್ರತೀರ್ಥರನ್ನು. ಚಕ್ರತೀರ್ಥ ಯಾರು? ಬಿಜೆಪಿಯವರು. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂವಿಧಾನ ಶಿಲ್ಪಿ ಪದವನ್ನೇ ಯಾಕೆ ತೆಗೆದು ಹಾಕಿದ್ದೀರಿ, ಏನು ಇದರ ಉದ್ದೇಶ, ಯಾಕೆ ತೆಗೆದು ಹಾಕಬೇಕಿತ್ತು, ಹೀಗೆ ಮಾಡಿದ್ದನ್ನು ಮಾತಾಡಿದರೆ ಜವಾಬ್ದಾರಿ ಇಲ್ಲ ಅಂತ ಅರ್ಥನಾ, ಅವರಿಗೆ ತಿರುಗುಬಾಣ ಆಗುತ್ತೆ ಅಂತನಾ? ಇತಿಹಾಸ ಹೇಗಿದೆ ಹಾಗೆ ಹೇಳಬೇಕಲ್ಲ ಮಕ್ಕಳಿಗೆ. ಇತಿಹಾಸ ತಿರುಚಿ ಹೇಳ್ತಿದಿರಿ ಅಂದರೆ ನಾನು ಸರಿ ಇಲ್ಲವೊ? ಎಂದ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಓದಿ :ಪಾಲಿಕೆ ಒಂದು ವಾರ್ಡ್ಗೆ ಪುನೀತ್ ರಾಜ್ಕುಮಾರ್ ಹೆಸರಿಡಿ: ಸಿಎಂಗೆ ಭಾಗ್ಯವತಿ ಅಮರೇಶ್ ಪತ್ರ