ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಾಗಲಕೋಟೆ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ನವನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ವೀಕ್ಷಣೆ ಮಾಡಿದರು.
ಕಟ್ಟಡದ ಬಗ್ಗೆ ಮಾಹಿತಿ ಪಡೆದು ಬಳಿಕ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಹಾಗೂ ಪಕ್ಷದ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ, ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಈ ಮುಂಚೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 11 ಜಿಲ್ಲೆಗಳಲ್ಲಿ ನೂತನ ಕಟ್ಟಡ ಕಾಮಗಾರಿ ನಡೆದಿದ್ದು, ಅವುಗಳ ವೀಕ್ಷಣೆಗೆ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಕೊರೊನಾ ರೋಗದ ಬಗ್ಗೆ ಮಾಹಿತಿ ಪಡೆದು, ಸೂಕ್ತ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.
ಇದೇ ವೇಳೆ ಸಹಿ ಸಂಗ್ರಹ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ನಮ್ಮಲ್ಲಿ ಸಹಿ ಸಂಗ್ರಹ ಒತ್ತಡ, ಒತ್ತಾಯದ ಪದ್ಧತಿ ಇಲ್ಲ. ಎಲ್ಲ ಬೆಳವಣಿಗೆ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೈ ಕಮಾಂಡ್ ಹೇಳಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಇವೆಲ್ಲ ಸಹಜ. ನೋವುಗಳನ್ನು, ಭಾವನೆಗಳನ್ನು ಹಂಚಿಕೊಳ್ಳುವುದು ಇದ್ದದ್ದೇ. ಮುಂದೆ ಚುನಾವಣೆ ವಿಷಯಗಳನ್ನು ಇಟ್ಟುಕೊಂಡು ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಿದೆ ಎಂದರು.
ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ದಾರೆ. ಸಿಎಂ ಹೇಳಿರೋದನ್ನ ಸ್ಪಷ್ಟಪಡಿಸಿದ್ದೇನೆ. ನಮ್ಮದು ಯಶಸ್ವಿಯಾಗಿರುವಂತಹ ಪಕ್ಷ. ನಮ್ಮ ಹಿರಿಯರು ಏನು ಸಲಹೆ ನೀಡುತ್ತಾರೋ ಅದನ್ನ ಪಾಲಿಸುತ್ತೇವೆ. ನಮ್ಮ ರಾಷ್ಟ್ರೀಯ ನಾಯಕರು, ಹೈ ಕಮಾಂಡ್ ಹೇಳಿದರೆ ರಾಜೀನಾಮೆ ಕೊಡ್ತೀನಿ ಅಂತ ಸಿಎಂ ಹೇಳಿದ್ದಾರೆ. ಅದೊಂದು ನಮ್ಮ ಪಾರ್ಟಿಯ ಆದರ್ಶ ಕಾರ್ಯಕರ್ತನ ಲಕ್ಷಣ. ಎಲ್ಲ ಕಾರ್ಯಕರ್ತರಿಗೆ ಪ್ರೇರಣೆಯಾಗುವ ರೀತಿಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರ ಸಭೆಯಲ್ಲಾಗಲಿ, ಶಾಸಕಾಂಗ ಸಭೆ ಸೇರಿದಂತೆ ಕೋರ್ ಕಮಿಟಿ ಎಲ್ಲೂ ನಾಯಕತ್ವ ಬದಲಾವಣೆ ಚರ್ಚೆಯಾಗಿಲ್ಲ ಎಂದರು.
ಬಳಿಕ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ತೆರಳಿ, ಇತ್ತೀಚೆಗೆ ಮೃತಪಟ್ಟಿರುವ ಬಿಜೆಪಿ ಮುಖಂಡ ಗುರುರಾಜ್ ಕಟ್ಟಿ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸ್ವಾಂತನ ಹೇಳಿದರು.
ಓದಿ: ಸಿಎಂ ಬಿಎಸ್ವೈ ರಾಜೀನಾಮೆ ವಿಚಾರ.. ಕಟೀಲ್ ನೀಡಿದ್ರು ಸ್ಪಷ್ಟ ಸಂದೇಶ