ಬಾಗಲಕೋಟೆ: ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ಬೆಂಬಲಿಸಿ ಬಿಜೆಪಿ ಪಕ್ಷದಿಂದ ಬಾಗಲಕೋಟೆ ನಗರದಲ್ಲಿ ಬೃಹತ್ ಜಾಥಾ ನಡೆಸಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯು ಜಾರಿಗೆ ತರಬೇಕು ಎಂದು ಬಿಜೆಪಿ ಪಕ್ಷದ ವತಿಯಿಂದ ನಗರದಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು. ಜಾಥಾದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ನಗರದ ಶಿವಾನಂದ ಜಿನ್ ಮೂಲಕ ಪ್ರಾರಂಭವಾದ ಮೆರವಣಿಗೆಯು ಬಸವೇಶ್ವರ ವೃತ್ತದ ಮೂಲಕ ಅಡತ ಬಜಾರ್ ಮಾರ್ಗವಾಗಿ, ಬಸವೇಶ್ವರ ಕಾಲೇಜ್ ರಸ್ತೆಯಿಂದ ಚರಂತಿಮಠ ಮಂಗಳ ಭವನದಲ್ಲಿ ಅಂತ್ಯಗೊಂಡಿತು. ವಿವಿಧ ಪ್ರದೇಶಗಳಿಂದ ಆಗಮಿಸಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿ ಪ್ರಧಾನಿ ಮೋದಿ ಪರವಾಗಿ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು. ಇಡೀ ನಗರ ಕೇಸರಿಮಯವಾಗಿದ್ದು, ಭಾರತ ಧ್ವಜ ಹಾಗೂ ಭಗವಾನ್ ಧ್ವಜ ರಾರಾಜಿಸುತ್ತಿದ್ದವು. ನಂತರ ನಡೆದ ಸಮಾರಂಭದಲ್ಲಿ ಮುಖಂಡರು ಮಾತನಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.