ಬಾಗಲಕೋಟೆ: ವಲ್ಲಭ ಭಾಯಿ ಪಟೇಲ್ ಅವರಿಗೆ ಬಹುಮತವಿತ್ತು. ಆದರೂ ಮಹಾತ್ಮ ಗಾಂಧಿ, ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಅವರು ಮಾಡಿದ ದೊಡ್ಡ ತಪ್ಪಿನಿಂದ ಒಬ್ಬ ಅಯೋಗ್ಯ ವ್ಯಕ್ತಿ ದೇಶದ ಪ್ರಧಾನಿಯಾದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಸಿಎಎ ಬೆಂಬಲಿಸಿ ಬಿಜೆಪಿ ಪಕ್ಷ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವಿಲಾಸಿ ಜೀವನ ಮಾಡುತ್ತಿದ್ದ ನೆಹರು ದೇಶದ ಪ್ರಧಾನಿಯಾದರು. ಅವರಿಗೆ ತ್ರಿಪಲ್ ಫೈವ್ ಸಿಗರೇಟ್ ಲಂಡನ್ನಿಂದ ಬರುತ್ತಿದ್ದವು. ಬಟ್ಟೆ ಕ್ಲೀನಿಂಗ್ಗೆ ಲಂಡನ್ಗೆ ಹೋಗುತ್ತಿದ್ದವು. ಇವರು ಬಡವರ ಬಗ್ಗೆ ಮಾತನಾಡುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಹೇಗೆ ಮರಣ ಹೊಂದಿದರು? ಎಂದು ಇಂದಿಗೂ ಯಾರೂ ಹೇಳುತ್ತಿಲ್ಲ ಎಂದರು.
ನಮ್ಮ ರಾಜಕಾರಣಿಗಳು ಸೈನಿಕರ ಬಗ್ಗೆ, ಪೊಲೀಸರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ತಿನ್ನೋಕೆ ಕೂಳಿಲ್ಲದವರು ಸೈನ್ಯ ಸೇರ್ತಾರೆ ಅಂತ ನಮ್ಮ ಅಯೋಗ್ಯ ರಾಜಕಾರಣಿಯೊಬ್ಬ ಹೇಳುತ್ತಾನೆ ಎಂದು ಕಿಡಿ ಕಾರಿದ್ದಾರೆ.
ಸಿಎಎಯಿಂದ ಭಾರತೀಯ ಮುಸಾಲ್ಮಾನರಿಗೆ ಯಾವುದೇ ತೊಂದರೆಯಿಲ್ಲ. ಕುರ್ಚಿಗಾಗಿ ರಾಜಕಾರಣ ಮಾಡುವವರಿಗೆ ಇದು ತೊಂದರೆಯಾಗಿದೆ ಎಂದಿದ್ದಾರೆ.
ಇದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಯತ್ನಾಳ್, ಸಿದ್ದರಾಮಯ್ಯ ಪ್ರಾಣ ಹೋದರೂ ಪರವಾಗಿಲ್ಲ, ಮಂಗಳೂರಿಗೆ ಹೋಗುತ್ತೇನೆ ಎಂದರು. ಪ್ರವಾಹ ಬಂದಾಗ ಅವರು ಬಾದಾಮಿಗೆ ಬರಬೇಕಿತ್ತು. ಆಗ ಅವರು ಎಲ್ಲಿ ಮಲಗಿದ್ದರು? ಕಣ್ಣು ಆಪರೇಷನ್ ಆಗಿದೆ ಅಂತ ಅಣವಾಡಿ ತೋರಿಸಿದ ಯತ್ನಾಳ್, ಮಂಗಳೂರಿಗೆ ಹೋಗುವಾಗ ಎದೆ ಆಪರೇಷನ್ ಆಗಿತ್ತಲ್ಲಾ? ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಸಿಎಂ ಇಬ್ರಾಹಿಂ ವಿರುದ್ಧವೂ ಅವರು ಕಿಡಿ ಕಾರಿದ್ದಾರೆ.