ಬಾಗಲಕೋಟೆ : ವೈದ್ಯರ ನಿರ್ಲಕ್ಷಕ್ಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯೊಬ್ಬರು ಪರದಾಡಿದ ಘಟನೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಬೀಳಗಿ ತಾಲೂಕಿನ ಅರಕೇರಿ ಗ್ರಾಮದ ರೇವಣಸಿದ್ದಪ್ಪ ನಾಯ್ಕೊಡೆ ಎಂಬ ರೋಗಿ ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದರು.
ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲ. ರೋಗಿಗೆ ಚಿಕಿತ್ಸೆ ಇಲ್ಲ ಎಂದ ಆಸ್ಪತ್ರೆಯ ಸಿಬ್ಬಂದಿ ಕೈ ಚೆಲ್ಲಿ ಕುಳಿತುಕೊಂಡಿದ್ದು, ಅಲ್ಲಿಂದ ಹೊರ ಸಾಗಿಸಿ ಕೈ ತೊಳೆದುಕೊಳ್ಳಲು ಯತ್ನಿಸಿದ್ದರು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹಣವಿಲ್ಲದ್ದಕ್ಕೆ ರೋಗಿಯ ಕಡೆಯವರು ಪರದಾಡಿದರು. ಸರ್ಕಾರಿ ಆಸ್ಪತ್ರೆ ಬಿಟ್ಟು ಎಲ್ಲೂ ಹೋಗಲ್ಲ. ನಮಗೆ ಆ ಶಕ್ತಿಯೂ ಇಲ್ಲ ಅಂತಾ ರೋಗಿ ಕಡೆಯವರ ಬಿಗಿಪಟ್ಟು ಹಿಡಿದು, ಚಿಕಿತ್ಸೆ ನೀಡುವಂತೆ ಕೇಳಿಕೊಳ್ಳುತ್ತಿದ್ದರು. ಮೂರು ಗಂಟೆ ಕಾಲ ಆ್ಯಂಬುಲೆನ್ಸ್ನಲ್ಲೇ ರೋಗಿ ಜೊತೆ ಆಸ್ಪತ್ರೆಯಲ್ಲಿ ಇದ್ದಿತ್ತು.
ಓದಿ-ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಸಂಪುಟ ವಿಸ್ತರಣೆ ಮಾತುಕತೆಯಲ್ಲಿ ಬ್ಯುಸಿಯಾದ ಸಚಿವ!
ಬಾಗಲಕೋಟೆ ನಗರದಲ್ಲಿರುವ ಐವತ್ತು ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಿಬ್ಬಂದಿಯ ಬೇಜವಾಬ್ದಾರಿಯನ್ನ ತಾಲೂಕಾ ವೈದ್ಯಾಧಿಕಾರಿ ಗಮನಕ್ಕೆ ತಂದಾಗ ಹಾಗೂ ಘಟನೆ ಚಿತ್ರೀಕರಣಗೊಳಿಸುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆಯ ಸಿಬ್ಬಂದಿ, ರೋಗಿಯನ್ನ ದಾಖಲಿಸಿಕೊಂಡು ಚಿಕಿತ್ಸೆ ನೀಡಿದರು.
ನಂತರ ಸ್ಥಳಕ್ಕೆ ದೌಡಾಯಿಸಿದ ತಾಲೂಕಾ ವೈದ್ಯಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿಯವರು, ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು.