ಬಾಗಲಕೋಟೆ : ಒಂದೇ ಹುದ್ದೆಗೆ ಆರೋಗ್ಯ ಇಲಾಖೆಯ ಇಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳ ಸಂಘರ್ಷ ಪರಿಹಾರವಾಗಿದೆ. ಹಾಲಿ ಇರುವ ಜಿಲ್ಲಾ ಮಟ್ಟದ ಅಧಿಕಾರಿ ಡಾ. ಜಯಶ್ರೀ ಎಮ್ಮಿ ಅವರು ಹುದ್ದೆಯಲ್ಲಿ ಮುಂದುವರೆಯುವಂತೆ ಸರ್ಕಾರ ಆದೇಶಿಸಿದೆ.
ಡಿಎಚ್‌ಓ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ತಿಕ್ಕಾಟ ನಡೆದಿತ್ತು. ಡಿಎಚ್‌ಓ ಜಯಶ್ರೀ ಎಮ್ಮಿ ಅವರು ರಜೆಯಲ್ಲಿದ್ದಾಗ ವರ್ಗಾವಣೆ ಆದೇಶ ಪತ್ರದೊಂದಿಗೆ ಬಂದಿದ್ದ ಡಾ. ರಾಜಕುಮಾರ ಯರಗಲ್ಲ ಅಧಿಕಾರ ವಹಿಸಿಕೊಂಡಿದ್ದರು. ಇದೇ ವೇಳೆ ತಮ್ಮ ವರ್ಗಾವಣೆ ವಿಚಾರವಾಗಿ ಡಾ. ಜಯಶ್ರೀ ಎಮ್ಮಿ ಅವರು ಕೆಎಟಿಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಇದರಿಂದ ಒಂದೇ ಹುದ್ದೆಗಾಗಿ ಇಬ್ಬರ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಡಾ. ಜಯಶ್ರೀ ಎಮ್ಮಿ ಅವರಿಗೆ ಅಧಿಕಾರದಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಆರೋಗ್ಯ ಇಲಾಖೆ ಕಮಿಷನರ್ ಕೂಡಾ ಜಯಶ್ರೀ ಎಮ್ಮಿ ಅಧಿಕಾರದಲ್ಲಿ ಮುಂದುವರೆಸಲು ಆದೇಶ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಚೇರಿಗೆ ಬಂದ ಜಯಶ್ರೀ ಎಮ್ಮಿ ಡಿಎಚ್‌ಓ ಅಧಿಕಾರಿಯಾಗಿ ಕಾರ್ಯನಿರತರಾಗಿದ್ದಾರೆ.
"ಕೆಎಟಿ ಹಾಗೂ ಹಿರಿಯ ಅಧಿಕಾರಿಗಳಿಂದ ನನಗೆ ನಿನ್ನೆಯೇ ಆದೇಶ ಬಂದಿದೆ. ನೀವು ನಿಮ್ಮ ಕರ್ತವ್ಯ ಮುಂದುವರೆಸಿ ಎಂದು ಆದೇಶಿಸಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಕರ್ತವ್ಯ ಮುಂದುವರೆಸುವಂತೆ ಸೂಚಿಸಿದ್ದಾರೆ. ನನ್ನ ಇಬ್ಬರು ಮೇಲಾಧಿಕಾರಿಗಳ ಆದೇಶವನ್ನು ಪಾಲಿಸುತ್ತೇನೆ. ಸುಮಾರು 8 ತಿಂಗಳ ಅಧಿಕಾರವಧಿ ಇದೆ. ನಂತರ ನಿವೃತ್ತಿ ಆಗಲಿದ್ದೇನೆ. ಹೀಗಾಗಿ ನ್ಯಾಯಾಲಯದ ಹಾಗೂ ಹಿರಿಯ ಅಧಿಕಾರಿಗಳ ಆದೇಶ ಪಾಲಿಸುತ್ತೇನೆ" ಎಂದು ಡಾ.ಜಯಶ್ರೀ ಎಮ್ಮಿ ತಿಳಿಸಿದರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಒಂದೇ ಹುದ್ದೆಗೆ ಇಬ್ಬರು ಜಿಲ್ಲಾ ಆರೋಗ್ಯ ಅಧಿಕಾರಿಗಳ ಹಗ್ಗಜಗ್ಗಾಟ!
ವರ್ಗಾವಣೆ ಆದೇಶ ಪ್ರಶ್ನಿಸಿ ನ್ಯಾಯಮಂಡಳಿಯ ಮೊರೆ ಹೋಗಿದ್ದ ಡಾ.ಜಯಶ್ರೀ ಎಮ್ಮಿ ಅವರಿಗೆ ಯಾವುದೇ ಹುದ್ದೆಯನ್ನು ನೀಡದಿರುವುದು ಮತ್ತು ಡಾ. ಯರಗಲ್ ಅವರನ್ನು ಅದೇ ಹುದ್ದೆಗೆ ವರ್ಗಾವಣೆ ಮಾಡಿರುವುದು ಈ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಡಾ. ರಾಜಕುಮಾರ ಯರಗಲ್, ''ಸರ್ಕಾರದ ಆದೇಶದ ಪ್ರಕಾರ ಇಲ್ಲಿಗೆ ವರ್ಗವಾಗಿ ಬಂದಿದ್ದು ಸರ್ಕಾರ ಏನು ಹೇಳಿದೆಯೋ ಅದನ್ನು ಪಾಲಿಸುವೆ. ವರ್ಗಾವಣೆ ಆದೇಶ ಪತ್ರವೂ ಸಹ ನನ್ನ ಬಳಿ ಇದೆ. ಇದರ ಹೊರತಾಗಿ ಏನು ಹೇಳಲಾರೆ" ಎಂದಿದ್ದರು.
ಇದನ್ನೂ ಓದಿ: IPS ಅಧಿಕಾರಿ ಡಿ.ರೂಪ ವಿರುದ್ಧದ ಮಾನಹಾನಿ ಪ್ರಕರಣ ರದ್ಧತಿಗೆ ಹೈಕೋರ್ಟ್ ನಿರಾಕರಣೆ