ಬಾಗಲಕೋಟೆ: ಜಿಲ್ಲೆಯು ಸಾಂಸೃತಿಕವಾಗಿ ಹಾಗೂ ಸಾಹಿತ್ಯಗಳ ಕೇಂದ್ರವಾಗಿರುವ ಜೊತೆಗೆ ಐತಿಹಾಸಿಕ ತಾಣವಾಗಿ ಇಡೀ ವಿಶ್ವದಲ್ಲಿಯೇ ಗಮನ ಸೆಳೆಯುವಂತಾಗಿದೆ. ಆರನೇಯ ಶತಮಾನದಲ್ಲಿ ಚಾಲುಕ್ಯರು ಆಳಿದ ಸ್ಮಾರಕಗಳು ದೇಶ ವಿದೇಶಗಳಿಂದ ಪ್ರವಾಸಿಗರನ್ನು ಕೈ ಬಿಸಿ ಕರೆಯುವಂತಾಗಿದೆ. ಆದರೆ, ಸೂಕ್ತ ಸೌಲಭ್ಯಗಳು ಇಲ್ಲದೇ ಪ್ರವಾಸಿಗರು ಹಿಡಿ ಶಾಪವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಪ್ರವಾಸಿ ಕೇಂದ್ರವಾಗಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಆದ್ದರಿಂದ ಈ ಭಾರಿ ಬಜೆಟ್ ನಲ್ಲಿ ಸರ್ಕಾರ ಇಂತಹ ತಾಣಗಳ ಅಭಿವೃದ್ದಿಗೆ ಹೆಚ್ಚು ಹಣದ ನೆರವು ನೀಡಿ ಅಭಿವೃದ್ದಿಗೆ ಕಾಯಕಲ್ಪ ಕೂಡಿ ಬರಲಿದೆ ಎಂದು ಆಶಾಭಾವನೆ ವ್ಯಕ್ತವಾಗಿದೆ.
ಬಾದಾಮಿಯಲ್ಲಿ ಚಾಲುಕ್ಯರ ಕಾಲದ ಆಡಳಿತದ ಸ್ಮಾರಕಗಳಾದ ಗುಹಾಲಯ, ಅಗಸ್ತತೀರ್ಥ ಹಾಗೂ ವಸ್ತು ಸಂಗ್ರಹಾಲಯ, ಶಿವಾಲಯ ಸೇರಿದಂತೆ ಇತರ ಸ್ಮಾರಕಗಳ ವೀಕ್ಷಣೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಗುಹಾಲಯಕ್ಕೆ ಹೋಗಬೇಕಾದರೆ ಇಟ್ಟಿನ ರಸ್ತೆ, ಸೂಕ್ತ ನಾಮಕ ಫಲಕ, ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದು, ಗುಹಾಲಯದಿಂದ ಶಿವಾಲಯ ದೇವಾಲಯಕ್ಕೆ ಅಗಸ್ತತೀರ್ಥಕ್ಕೆ ಹೋಗಬೇಕಾದರೆ ಹೇಗೆ ಹೋಗಬೇಕು ಎಂಬುದು ಪ್ರವಾಸಿಗರ ಗೊಂದಲ ಇರುತ್ತದೆ. ಪ್ರಮುಖ ಮಾರುಕಟ್ಟೆಯಿಂದಲೇ ಗದ್ದಲ ಟ್ರಾಫಿಕ್ ಮಧ್ಯೆ ಹಾಯ್ದು ಹೋಗಬೇಕಾದರೆ ಪ್ರವಾಸಿಗರಿಗೆ ಸುಸ್ತಾಗುತ್ತದೆ.
ಈಗ ಕೇಂದ್ರ ಸರ್ಕಾರ ಅಗಸ್ತತೀರ್ಥ ಹೊಂಡದಲ್ಲಿ ಎದುರು ಇರುವ 96 ಅಕ್ರಮ ಮನೆಗಳ ಸ್ಥಳಾಂತರ ಕಾರ್ಯ ನಡೆಸುತ್ತಿದೆ. ಇದರ ನಂತರ ರಾಜ್ಯ ಸರ್ಕಾರ ರಸ್ತೆ ಅಭಿವೃದ್ದಿಗೊಳಿಸುವುದು ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿ, ಸ್ಥಳೀಯ ಜನತೆಗೆ ಉದ್ಯೋಗವಕಾಶ ನೀಡುವುದು, ಹೊಂಡದಲ್ಲಿ ಬೆಳಕು ಶಬ್ದದ ಕಾರಂಜಿ ನಿರ್ಮಾಣ, ಬೋಟ್ ವ್ಯವಸ್ಥೆ ಸೇರಿದಂತೆ ಇತರ ಯೋಜನೆ ಈ ಹಿಂದೆ ಮಾಡಲಾಗಿತ್ತು. ಅದಕ್ಕೆ ಬೇಕಾದ ಹಣವನ್ನು ಬಜೆಟ್ನಲ್ಲಿ ಇಡುವುದು ಅಗತ್ಯವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರವಾಗಿರುವುದರಿಂದ ಇಷ್ಟೆಲ್ಲಾ ಕಾರ್ಯಗತವಾಗಬೇಕಾಗಿದೆ.
ಪಟ್ಟದಕಲ್ಲು ಸಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದೆ. ಚಾಲುಕ್ಯರ ವಾಸ್ತು ಶಿಲ್ಪದ ತೊಟ್ಟಿಲು ಎಂದು ಕರೆಯಲ್ಪಡುವ ಪಟ್ಟದಕಲ್ಲು ನಲ್ಲಿ ವಸತಿ, ಊಟ ಉಪಚಾರ ಮಾಡುವಂತಹ ಹೋಟೆಲ್ ಇರುವುದಿಲ್ಲ. ಮಲ್ಲಪ್ರಭಾ ನದಿಯ ದಡದಲ್ಲಿರುವ ಪಟ್ಟದಕಲ್ಲು ನದಿಪಾತ್ರದಲ್ಲಿ ಪ್ರವಾಹ ಉಂಟಾದರೆ, ಇಡೀ ಗ್ರಾಮವೇ ನಡುಗಡ್ಡೆ ಆಗಲಿದೆ. ಹೀಗಾಗಿ ಸ್ಮಾರಕಗಳ ಅಕ್ಕಪಕ್ಕದಲ್ಲಿರುವ ಮನೆಗಳ ಸ್ಥಳಾಂತರ ಮಾಡಬೇಕು ಎಂಬ ಕೂಗು ಈ ಹಿಂದೆ ಇತ್ತು. ಆದ್ರೆ ಸ್ಥಳೀಯ ಜನರ ವಿರೋಧ ಮತ್ತು ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಅದು ಹಾಗೆ ಉಳಿದಿದೆ.
ಪ್ರವಾಸೋಧ್ಯಮಿ ಇಲಾಖೆ ವತಿಯಿಂದ ವಸತಿ, ಹೋಟೆಲ್ ಮಾಡುವುದಕ್ಕೆ ಅಡಿಗಲ್ಲು ಹಾಕಲಾಗಿದೆ. ಇನ್ನು ಕಾಮಗಾರಿ ಪ್ರಾರಂಭವಾಗಬೇಕಾಗಿದೆ. ಈಗ ಬಜೆಟ್ನಲ್ಲಿ ಇದರ ಸ್ಥಳಾಂತರಕ್ಕೆ ಹಾಗೂ ಅಭಿವೃದ್ದಿ ಕಾಮಗಾರಿಗೆ ಹಣ ನೆರವು ಅಗತ್ಯವಿದೆ. ಇನ್ನು ಐಹೊಳೆಯ ಸಹ ಚಾಲುಕ್ಯರ ಕಾಲ ಆಡಳಿತ ಸ್ಮಾರಕಗಳು ಇರುವುದರಿಂದ ಪ್ರವಾಸಿಗರು ಒಂದು ದಿನದಲ್ಲಿ ಮೂರು ಸ್ಥಳಗಳು ವೀಕ್ಷಣೆ ಮಾಡಿಕೊಂಡು ಹೋಗುತ್ತಾರೆ. ಆದರೆ ಐಹೊಳೆ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಂಡಿಲ್ಲ. ಸ್ಥಳಾಂತರ ಸಹ ಹಾಗೆ ಉಳಿದುಕೊಂಡಿದೆ. ಸ್ಥಳೀಯ ಉದ್ಯೋಗಕ್ಕೆ ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುವುದು ಅಗತ್ಯವಿದೆ.
ಇದರ ಜೊತೆಗೆ ಬಾದಾಮಿ ಹಾಗೂ ಹುನಗುಂದ - ಇಲಕಲ್ಲ ತಾಲೂಕಿನಲ್ಲಿ ಇನ್ನು ಕೆಲವೊಂದು ಬೆಳಕಿಗೆ ಬಾರದ ಐತಿಹಾಸಿಕ ಸ್ಥಳಗಳ ಇದ್ದು, ಅವುಗಳ ಮೂಲ ಸೌಲಭ್ಯಗಳಿಗೆ ಒತ್ತು ನೀಡಬೇಕಾಗಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸೋದ್ಯಮಕ್ಕೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಿ, ಅಭಿವೃದ್ದಿ ಪಡಿಸುವುದಕ್ಕೆ ಮುಂದಾಗುತ್ತಾರೆಯೇ ಎಂದು ಸ್ಥಳೀಯರು ಆಶಾಭಾವನೆ ಇಟ್ಟುಕೊಂಡಿದ್ದಾರೆ.