ಬಾಗಲಕೋಟೆ: ನಡುರಸ್ತೆಯಲ್ಲಿ ವಕೀಲೆ ಮೇಲೆ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಸಾರ್ವಜನಿಕರ ಎದುರಲ್ಲೆ ಮಹಿಳೆ ಅಂತ ನೋಡದೇ ವ್ಯಕ್ತಿಯೊಬ್ಬ ಒದೆಯುತ್ತಿರುವ ದೃಶ್ಯ ಮೊಬೈಲ್ದಲ್ಲಿ ಸೆರೆ ಹಿಡಿಯಲಾಗಿದೆ. ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಅವರ ಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ವಕೀಲೆಯ ಮೇಲೆ ಬಾಗಲಕೋಟೆಯ ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬಾತ ಹಲ್ಲೆ ಮಾಡಿದ್ದಾನೆ. ಕಾಲು, ಎದೆಭಾಗ, ತಲೆಗೆ ಪೆಟ್ಟಾಗಿದೆ ಎಂದು ವಕೀಲೆ ಸಂಗೀತಾ ಆರೋಪಿಸಿದ್ದಾರೆ. ತನ್ನ ಪತಿಗೆ ಕಿವಿ ಹಾಗೂ ತಲೆಗೆ ಗಾಯವಾಗಿದೆ. ವಕೀಲೆ ಮತ್ತು ಪತಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಜೆಪಿ ಮುಖಂಡ ರಾಜು ನಾಯ್ಕರ್ ಕುಮ್ಮಕ್ಕಿನಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾನೆ ಎಂದು ವಕೀಲೆ ಆರೋಪ ಮಾಡಿದ್ದಾರೆ. ಬಿಜೆಪಿ ಮುಖಂಡ ರಾಜು ನಾಯ್ಕರ್ ಕಳೆದ ಮೇ 8ರಂದು ನಸುಕಿನಜಾವ ಬುಲ್ಡೋಜರ್ನಿಂದ ಸಂಗೀತಾ ಮನೆಯ ಮುಂದಿನ ಕಾಂಪೌಂಡ್ ಹಾಗೂ ಶೌಚಾಲಯ ಕೆಡವಿದ್ದರು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ರಾಜು ನಾಯ್ಕರ್ ವಿರುದ್ಧ ಠಾಣೆಯಲ್ಲಿ ದೂರು ಕೊಟ್ಟಿದ್ದರಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾನೆ ಆರೋಪ ಮಾಡಿದ್ದಾರೆ.
ಹಲ್ಲೆ ಮಾಡಿಲ್ಲ ಎಂದು ಮಹಾಂತೇಶ್ ಚೊಳಚಗುಡ್ಡ ಹೇಳಿದ್ದಾನೆ. ಆದರೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಮುಖಂಡ ರಾಜು ನಾಯ್ಕರ್ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನೆ ಪೊಲೀಸರು ಬಂದಾಗ ಸಂಗೀತಾ ಶಿಕ್ಕೇರಿ ಅವರ ಮನೆ ಎಲ್ಲಿ ಎಂದಾಗ ತೋರಿಸಿದ್ದೆ. ನಮ್ಮ ಮನೆಯ ಹತ್ತಿರವೇ ಇರುವುದರಿಂದ ತೋರಿಸಿದ್ದೆ. ಅದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನ್ನ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಮಹಾಂತೇಶ ಆರೋಪಿಸಿದ್ದಾನೆ.
ವಕೀಲೆ ದೂರು ದಾಖಲಿಸಿದ್ದು, ಆರೋಪಿ ಮಹಾಂತೇಶ್ ಚೊಳಚಗುಡ್ಡನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಶರದ್ ಪವಾರ್ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಪೊಲೀಸ್ ವಶಕ್ಕೆ