ಬಾಗಲಕೋಟೆ: ಕೊರೊನಾ ಭೀತಿಯಿಂದ ಲಾಕ್ಡೌನ್ ಆದ ಸಮಯದಲ್ಲಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಬಾಗಲಕೋಟೆಯ ಯುವಕನೋರ್ವ ಲವ್ ಬರ್ಡ್ಸ್ ಸಾಕಿ, ಮನೆಯಲ್ಲಿಯೇ ಚಿಕ್ಕ ವ್ಯಾಪಾರ ವಹಿವಾಟು ಪ್ರಾರಂಭ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ನವನಗರದ ಸೆಕ್ಟರ್ ನಂಬರ್ 35ರಲ್ಲಿರುವ ಮಲ್ಲು ಪಾದನಕಟ್ಟಿ ಎಂಬುವ ಯುವಕ ಲವ್ ಬರ್ಡ್ಸ್ ಸಾಕಿದ್ದಾನೆ. ಗೆಳೆಯರಿಂದ ಮಾಹಿತಿ ಪಡೆದುಕೊಂಡು ಲಾಕ್ಡೌನ್ ಸಮಯದಲ್ಲಿ ಈ ಕೆಲಸ ಮಾಡಿದ್ದಾನೆ. ಚಿಕ್ಕದಾದ ಮನೆಯಲ್ಲಿ ತೆಳುವಾದ ಬಟ್ಟೆಯಿಂದ ಪಕ್ಷಿಗಳಿಗೆ ಮನೆ ಮಾಡಿದ್ದಾರೆ. ಮಣ್ಣಿನ ಮಡಿಕೆಯಲ್ಲಿಯೇ ಈ ಪಕ್ಷಿಗಳಿಗೆ ಮನೆ ಮಾಡಿದ್ದು, ಅದರಲ್ಲಿಯೇ ಲವ್ ಬರ್ಡ್ಸ್, ಮೊಟ್ಟೆ ಹಾಕಿ ಚಿಕ್ಕ ಮರಿ ಮಾಡುತ್ತಿವೆ.
ಕೇವಲ ಹತ್ತು ಇದ್ದ ಪಕ್ಷಿಗಳು ಈಗ ಮೂವತ್ತಕ್ಕೂ ಹೆಚ್ಚಾಗಿವೆ. ಇದರ ಜೊತೆಗೆ ಎರಡು ಮೊಲ ಸಾಕಿದ್ದಾನೆ. ಪಕ್ಷಿಗಳಿಗೆ ಕಾಳು, ಧಾನ್ಯಗಳನ್ನು ಆಹಾರವಾಗಿ ಇಡಲಾಗಿದ್ದು, ಸದಾ ಚಿಲಿಪಿಯ ಹಾರಾಟ ಸದ್ದು ಮಾಡುತ್ತಾ ಇರುತ್ತವೆ. ಪಂಜರ ಜೊತೆಗೆ ಜೋಡಿಗೆ 300 ರಿಂದ 500 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಸೊಲ್ಲಾಪುರ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಖರೀದಿ ಮಾಡಲು ಬರುತ್ತಿದ್ದಾರೆ. ಆದರೆ ಇನ್ನು ಮಾರಾಟ ಮಾಡುತ್ತಿಲ್ಲ.
ಇಂತಹ ಪಕ್ಷಿಗಳ ಫಾರ್ಮ್ ಮಾಡಿ ಅಭಿವೃದ್ಧಿ ಪಡಿಸಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಗುರಿ ಇಟ್ಟುಕೊಂಡಿದ್ದಾರೆ. 30 ಸಾವಿರಕ್ಕೂ ಅಧಿಕ ವೆಚ್ಚ ಮಾಡಿ ಸಾಗಾಣಿಕೆ ಮಾಡುವ ಮೂಲಕ ನಿರುದ್ಯೋಗ ಹೋಗಲಾಡಿಸಲು ಯೋಜನೆ ರೂಪಿಸಿದ್ದಾರೆ. ಒಂದೆಡೆ ಕೊರೊನಾದಿಂದ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಯಲ್ಲಿ ಯುವಕರು ಇದ್ದರೆ, ಮತ್ತೊಂದೆಡೆ ಕೊರೊನಾ ಸಮಯ ಉಪಯೋಗ ಮಾಡಿಕೊಂಡು ಉದ್ಯೋಗ ಹೆಚ್ಚಿಸಿಕೊಳ್ಳುತ್ತಿರುವ ಯುವಕರು ಇದ್ದಾರೆ.