ಬಾಗಲಕೋಟೆ: ಸಚಿವ ಉಮೇಶ ಕತ್ತಿ ಅವರು ಬಾಗಲಕೋಟೆ ಜಿಲ್ಲೆಗೆ ಉಸ್ತುವಾರಿ ಆಗಿರುವುದು ನಾಮಕಾವಸ್ತೆಗೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರು ಕೊರೊನಾ, ಪ್ರವಾಹ ಹಾಗೂ ಇತರ ಸಭೆಗಳು ಇದ್ದಾಗ ಮಾತ್ರ ಬರುತ್ತಾರೆ. ಆದರೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಏನಾದರೂ ಹೊಸತನ ಯೋಜನೆ ಮಾಡುವ ಬಗ್ಗೆ ಎಳ್ಳಷ್ಟು ಚಿಂತೆ ಇಲ್ಲ. ಬೆಲ್ಲದ ಬಾಗೇವಾಡಿಯಿಂದ ಜಿಲ್ಲಾಡಳಿತ ಭವನಕ್ಕೆ ಬಂದು ಸಭೆ ಮುಗಿಸುವುದು ಬಳಿಕ ಐಬಿಯಲ್ಲಿ ಊಟ ಮಾಡುತ್ತಾರೆ. ನಂತರ ಬೆಲ್ಲದ ಬಾಗೇವಾಡಿಗೆ ಹೋಗುತ್ತಿದ್ದಾರೆ ಎಂಬ ಆರೋಪಗಳಿವೆ.
ಆಗಸ್ಟ್ 15 ರಂದು ಧ್ವಜಾರೋಹಣ ಮಾಡಿ ಹೋದ ಸಚಿವರು ಮತ್ತೆ ಈಕಡೆ ಏನಾಗುತ್ತಿದೆ ಎಂದು ಇಣುಕಿ ಸಹ ನೋಡಿಲ್ಲ. ಸ್ವಂತ ಜಿಲ್ಲೆಯವರಾದ ಗೋವಿಂದ ಕಾರಜೋಳ ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾಗ ವಾರದಲ್ಲಿ ಒಮ್ಮೆ ಆದರೂ ಭೇಟಿ ನೀಡುತ್ತಿದ್ದರು. ತಮ್ಮ ಸ್ವಂತ ಕ್ಷೇತ್ರ ಮುಧೋಳ ಮತ ಕ್ಷೇತ್ರಕ್ಕೆ ಭೇಟಿ ನೀಡಿ, ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇತರ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು.
ತಮ್ಮ ಕ್ಷೇತ್ರಕ್ಕೆ ಆಗಾಗ ಬರುತ್ತಿರುವುದರಿಂದ ಜಿಲ್ಲೆಯ ಬಗ್ಗೆ ಗಮನ ಹರಿಸುತ್ತಿದ್ದರು. ಗೋವಿಂದ ಕಾರಜೋಳ ಅವರು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಮಾಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಬೆಳಗಾವಿ ಜಿಲ್ಲಾ ರಾಜಕಾರಣವನ್ನು ಗೋವಿಂದ ಕಾರಜೋಳ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬೆಳಗಾವಿ ಉಸ್ತುವಾರಿ ನೀಡಿದ್ದರು. ಅದನ್ನೇ ಈಗಿನ ಸಿಎಂ ಮುಂದುವರೆಸಿದ್ದಾರೆ.
ಇದರ ಜೊತೆಗೆ ಸಚಿವ ಮುರುಗೇಶ್ ನಿರಾಣಿ ಸಹ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಆಗಲು ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಸ್ಥಳೀಯ ರಾಜಕಾರಣದಿಂದಾಗಿ ಅವರಿಗೆ ಬೇರೆ ಜಿಲ್ಲೆ ವಹಿಸಲಾಗಿದೆ. ಮುರುಗೇಶ್ ನಿರಾಣಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದರೆ ಅವರ ಆಡಳಿತ ಮಂಡಳಿ ಸಕ್ಕರೆ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬೀಳಗಿ ಮತಕ್ಷೇತ್ರದಲ್ಲಿ ರಾಜಕಾರಣ ಮಾಡಲು ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ನಿರಾಣಿ ಅವರು ಸಹ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣು ಇಟ್ಟಿದ್ದರು. ಆದರೆ ಅವರನ್ನು ದೂರದ ಕಲಬುರಗಿ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ: ಬದುಕಿದ್ದರೆ ಇದೇ ಅವಧಿಗೆ ಮುಖ್ಯಮಂತ್ರಿ, ಸತ್ತರೆ ಏನ್ಮಾಡೋದು?- ಸಚಿವ ಕತ್ತಿ ಹಾಸ್ಯಚಟಾಕಿ
ಸ್ವಂತ ಕ್ಷೇತ್ರದವರಿಗೆ ಉಸ್ತುವಾರಿ ನೀಡಿದ್ದಲ್ಲಿ ತಮ್ಮ ಮತಕ್ಷೇತ್ರಕ್ಕೆ ಆಗಮಿಸಿದ ಸಮಯದಲ್ಲಿ ಜಿಲ್ಲೆಯ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಬೇರೆ ಜಿಲ್ಲೆಯವರಿಗೆ ಉಸ್ತುವಾರಿ ನೀಡಿದರೆ ಹೆಸರಿಗೆ ಮಾತ್ರ ಎಂಬಂತೆ ಆಗಾಗ್ಗೆ ಬಂದು ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ್ ಕತ್ತಿ ಅವರು ಬಾಗಲಕೋಟೆ ಜಿಲ್ಲೆಗೆ ತಿಂಗಳಿಗೆ ಒಂದು ಬಾರಿ ಬಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಧ್ಯಮಗಳಿಗೆ ವಿವಾದತ್ಮಕ ಹೇಳಿಕೆ ಇಲ್ಲವೇ, ಮುಂದೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಪ್ರತಿಕ್ರಿಯಿಸಿ ಹೋಗುತ್ತಾರೆ. ಆದರೆ ಈ ಜಿಲ್ಲೆಯ ಜ್ವಲಂತ ಸಮಸ್ಯೆ, ರೈತರು, ನೇಕಾರರು ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಸಮಸ್ಯೆ ಏನಾದರೂ ಮಾಡಬೇಕು ಎಂಬ ಹಂಬಲ ಇಲ್ಲದೆ ಕೇವಲ ನಾಮಕಾವಸ್ತೆಗೆ ಉಸ್ತುವಾರಿ ಸಚಿವರಾಗಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.