ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಬಾಗಲಕೋಟೆ ನಗರಸಭೆ ಮಾತ್ರ ಗ್ರಹಣದಂತೆ ಕಂಡು ಬರುತ್ತಿದೆ. 30 ಸದಸ್ಯ ಬಲ ಹೊಂದಿರುವ ಬಿಜೆಪಿ ಅಧ್ಯಕ್ಷ ಹುದ್ದೆ ಪಡೆಯುವಲ್ಲಿ ವಿಫಲವಾಗಿದೆ.
ನಗರಸಭೆ ಆಡಳಿತ ಬಹುಮತದೊಂದಿಗೆ ಬಿಜೆಪಿ ಪಕ್ಷದ ಸದಸ್ಯರು ಇದ್ದಾರೆ. ಒಟ್ಟು 35 ಸದಸ್ಯರಲ್ಲಿ 30 ಬಿಜೆಪಿಯಾದರೆ ಕೇವಲ 5 ಜನ ಕಾಂಗ್ರೆಸ್ ಪಕ್ಷದ ಸದಸ್ಯರು ಇದ್ದಾರೆ.
30 ಜನ ಸದಸ್ಯರಿದ್ದರೂ ಅಧ್ಯಕ್ಷಗಿರಿ ಮಾತ್ರ ಕಾಂಗ್ರೆಸ್ ಪಾಲಾಗಿರುವುದು ಆಶ್ಚರ್ಯ ಮೂಡಿಸಿದೆ. ಇದು ಬಿಜೆಪಿ ಕಾರ್ಯಕರ್ತರು ಹಾಗೂ ಸದಸ್ಯರಿಗೂ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷಕ್ಕೆ ಅಧ್ಯಕ್ಷೆ ಸ್ಥಾನ ಸಿಗದಂತೆ ಹುನ್ನಾರ ನಡೆಸುತ್ತಿರುವುದು ಯಾರೂ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ನಗರಸಭೆ ಚುನಾವಣೆ ಬಳಿಕ ಅಧ್ಯಕ್ಷ ಸ್ಥಾನ ಮೀಸಲಾತಿ ಎಸ್ಟಿ ಮಹಿಳೆ ನಿಗದಿ ಆಗಿರುವುದು ಬಿಜೆಪಿ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ. ಏಕೆಂದರೆ ಬಿಜೆಪಿ ಪಕ್ಷದಿಂದ ಆಯ್ಕೆ ಆದವರಲ್ಲಿ ಎಸ್ಟಿ ಮಹಿಳೆಯರು ಇಲ್ಲ. ಕೇವಲ 5 ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಎಸ್ಟಿ ಮಹಿಳೆ ಇದ್ದಾರೆ.
ಚುನಾವಣೆ ಸಮಯದಲ್ಲಿ ಮೀಸಲಾತಿ ವಾರ್ಡ್ ಪ್ರಕಟವಾಗದೆ, ಸಾಮಾನ್ಯ ವಾರ್ಡ್ನಿಂದ ಸ್ಪರ್ಧೆ ಮಾಡಿ ಎಸ್ಟಿ ಮಹಿಳೆ ಆಯ್ಕೆ ಆಗಿದ್ದಾರೆ. ಈಗ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಯಾವ ಆಧಾರದಿಂದ ನಿಗದಿ ಮಾಡಿದ್ದೀರಿ ಎಂದು ಕೋರ್ಟ್ ಮೆಟ್ಟಿಲು ಏರಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ವರ್ಷವೇ ನ್ಯಾಯಾಲಯ ಆದೇಶ ಮಾಡಿ, ಈ ಹಿಂದೆ ಇದ್ದ ಎಸ್ಸಿ ಮಹಿಳೆ ಮೀಸಲಾತಿಯೇ ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದೆ.
ಇದರ ನಂತರ ಚುನಾವಣಾ ಆಯೋಗ ಮತ್ತೆ ಎಸ್ಟಿ ಮೀಸಲಾತಿ ಪ್ರಕಟಿಸಿದ್ದು, ಬಿಜೆಪಿ ಪುನಃ ಕೋರ್ಟ್ ಮೆಟ್ಟಿಲು ಏರಿದರು. ನ್ಯಾಯಾಲಯದಲ್ಲಿ ವಾದ ನಡೆಯುತ್ತಿರುವಾಗಲೇ ಕೊರೊನಾದಿಂದ ನ್ಯಾಯಾಲಯಗಳನ್ನು ಬಂದ್ ಮಾಡಲಾಯಿತು. ಇದರಿಂದ ಆದೇಶಕ್ಕೆ ಮತ್ತೆ ಗ್ರಹಣ ಹಿಡಿದಂತಾಯಿತು. ಹೀಗಾಗಿ ಅಧಿಕಾರ ಅನುಭವಿಸವುದಕ್ಕೆ ಮತ್ತೆ ಕಾಲ ಕೂಡಿಬಾರದೆ ಆಯ್ಕೆ ಆದ 30 ಜನ ನಗರಸಭೆ ಸದಸ್ಯರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಮೀಸಲಾತಿ ಪಟ್ಟಿ ಪ್ರಕಟಗೊಂಡ ನಂತರ ಅಧಿಕಾರ ಸಿಗುವ ನಿರೀಕ್ಷೆಯಲ್ಲಿ ಸದಸ್ಯರಿದ್ದಾರೆ. ಹಿಂದಿನಂತೆ ಎಸ್ಸಿ ಮಹಿಳೆಗೆ ಸ್ಥಾಣ ಖಚಿತವಾದಲ್ಲಿ ಬಿಜೆಪಿಯ ಜ್ಯೋತಿ ಭಂಜತ್ರಿ ಅಧ್ಯಕ್ಷರಾಗಲಿದ್ದಾರೆ. ಇಲ್ಲವಾದರೆ ಮತ್ತೆ ಅಧಿಕಾರ ಕಾಂಗ್ರೆಸ್ ಪಾಲಾಗಲಿದೆ.