ಬಾಗಲಕೋಟೆ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಸನ್ನದ್ದವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಸೂಚಿಸಿದರು.
ನಗರದ ಯುಕೆಪಿಯ ಸಂಗಮ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು, ಕೋವಿಡ್ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಗಡಿ ಚೆಕ್ಪೋಸ್ಟ್ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಪ್ರತಿದಿನ 4 ಸಾವಿರ ಸ್ಯಾಂಪಲ್ ತೆಗೆದುಕೊಳ್ಳಬೇಕು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನರು ಮಾಸ್ಕ್ ಹಾಕದಿದ್ದಲ್ಲಿ ದಂಡ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಈಗಾಗಲೇ 54 ಸಾವಿರ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಕಂಡುಬಂದಿಲ್ಲ. ಕೆಎಸ್ಆರ್ಟಿಸಿಯ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ. ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ. ನಿರಾಶ್ರಿತರು, ಭಿಕ್ಷುಕರಿಗೂ ಸಹ ಕೊರೊನಾ ಲಸಿಕೆ ನೀಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆ ಪ್ರಾರಂಭವಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದಾಗ, ಇಲ್ಲಿಯವರೆಗೆ ಎಲ್ಲಿಯೂ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಜೂನ್ ಮಾಹೆಯವರೆಗೆ ಸಮಸ್ಯೆ ಇರುವುದಿಲ್ಲ. ಎಲ್ಲ ತಾಲೂಕಿನ ತಹಶೀಲ್ದಾರ್ರಿಗೆ 50 ಲಕ್ಷ ರೂ. ನೀರಿಗಾಗಿ ನೀಡಲಾಗಿದೆ. ಆರ್‌ಡಿಪಿಆರ್‌ನಲ್ಲಿ ಟ್ಯಾಂಕರ್ ಸರಬರಾಜಿಗಾಗಿ 80 ಲಕ್ಷ ರೂ.ಗಳ ಅನುದಾನವಿದೆ. ಜಿಎಲ್ಬಿಸಿ, ಜಿಆರ್ಬಿಸಿ, ಎಂಎಲ್‍ಬಿಸಿಯಲ್ಲಿ ನೀರು ಬಿಡುಗಡೆಯಾಗಿದೆ. ಬಾಗಲಕೋಟೆ ನಗರಕ್ಕೂ ನೀರಿನ ಸಮಸ್ಯೆ ಇಲ್ಲವೆಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.
ಜಿ.ಪಂ. ಸಿಇಓ ಟಿ. ಭೂಬಾಲನ ಮಾತನಾಡಿ, ಜಲಜೀವನ ಮಿಶನ್ ಯೋಜನೆಯಡಿ ಜಿಲ್ಲೆಯ 337 ಹಳ್ಳಿಗಳಲ್ಲಿನ ಪ್ರತಿ ಮನೆಗೆ ನೀರು ಹರಿಸಲು ಕ್ರಮವಹಿಸಲಾಗುತ್ತಿದೆ. 30 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೂ ಸಹ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ 15 ಹೊಸ ಕೊರೊನಾ ಪ್ರಕರಣ ಪತ್ತೆ:
ಜಿಲ್ಲೆಯಲ್ಲಿ ಶನಿವಾರ 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಕೋವಿಡ್‍ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 13,826 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 13,660 ಜನರು ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 6, ಬಾದಾಮಿ ಮತ್ತು ಮುಧೋಳ ತಲಾ 2, ಬೀಳಗಿ 4 ಹಾಗೂ ಜಮಖಂಡಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಸೋಂಕಿತರಿಗೆ ಸರ್ಕಾರಿ, ಖಾಸಗಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 2,684 ಸ್ಯಾಂಪಲ್‍ಗಳ ವರದಿ ಬರಬೇಕಿದೆ.
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 41,08,84 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 39,3,806 ಜನರ ವರದಿ ನೆಗೆಟಿವ್ ಬಂದಿದ್ದು, 136 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 30 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.