ಬಾಗಲಕೋಟೆ: ಜಿಲ್ಲೆಯಲ್ಲಿ 212 ಜನ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಹೊಸದಾಗಿ 170 ಕೊರೊನಾ ಪ್ರಕರಣಗಳು ಬುಧವಾರ ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 3,512 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇಲ್ಲಿಯವರೆಗೆ ಒಟ್ಟು 2,345 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ ಶೇ.66 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 23, ಬಾದಾಮಿ 33, ಹುನಗುಂದ 31, ಬೀಳಗಿ 28, ಮುಧೋಳ 9, ಜಮಖಂಡಿ 43, ಬೇರೆ ಜಿಲ್ಲೆಯ 3 ಜನ ಇದ್ದು, ಅವರನ್ನು ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯ 1,179 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 636 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 38,927 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 33,949 ನೆಗಟಿವ್ ಪ್ರಕರಣ, 3,512 ಪಾಸಿಟಿವ್ ಪ್ರಕರಣ ಹಾಗೂ 55 ಜನ ಮೃತ ಪ್ರಕರಣ ವರದಿಯಾಗಿರುತ್ತದೆ. ಇನ್ನು 1,114 ಸಕ್ರಿಯ ಪ್ರಕರಣಗಳಿವೆ. ಇಲ್ಲಿವರೆಗೆ ಒಟ್ಟು 187 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. 159 ಕಂಟೇನ್ಮೆಂಟ್ ಝೋನ್ ಇದ್ದು, ಇನ್‍ಸ್ಟಿಟ್ಯೂಷನ್ ಕ್ವಾರಂಟೈನ್‍ನಲ್ಲಿದ್ದ 8,267 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆಕ್ಸಿಜನ್ ಬೆಡ್‍ಗಳ ಸಂಖ್ಯೆ ಹೆಚ್ಚಳ:
ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್‍ಗಳ ಸಂಖ್ಯೆಯನ್ನು 155ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು 40 ಆಕ್ಸಿಜನ್ ಬೆಡ್‍ಗಳ ಸೌಲಭ್ಯವಿತ್ತು, ಮತ್ತೆ 115 ಆಕ್ಸಿಜನ್ ಬೆಡ್‍ಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದರಿಂದ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲಿದೆ.
ನವನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಇದ್ದರು.