ಬಾಗಲಕೋಟೆ: ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಅಡ್ಡ ಮತದಾನದಿಂದಾಗಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಜಯಕುಮಾರ ಸರನಾಯಕ, ಉಪಾಧ್ಯಕ್ಷರಾಗಿ ಮುರಗೇಶ ಕಡ್ಲಿಮಟ್ಟಿ ಆಯ್ಕೆಯಾದರು.
ಅಜಯಕುಮಾರ ಸರನಾಯಕ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮೊದಲ ಬಾರಿಗೆ ಮುರಗೇಶ ಕಡ್ಲಿಮಟ್ಟಿ ಅಧಿಕಾರ ವಹಿಸಿಕೊಂಡರು. ಬಿಜೆಪಿ ಬೆಂಬಲಿತರಾಗಿ ಕುಮಾರ ಜಬಾಲಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ತಪಶೆಟ್ಟಿಯವರು ಸ್ಪರ್ಧೆ ಮಾಡಿದ್ದರು.
ನ. 17ರಂದು ಹದಿನೈದು ಜನ ಮತದಾನ ಮಾಡಿದ್ದರು. ಇದರಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಸಿದ್ದನಗೌಡರ ಮತ ಎಣಿಕೆ ಮಾಡಬಾರದೆಂದು ಧಾರವಾಡ ಹೈಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಅವರ ಮತವನ್ನು ಅಷ್ಟೇ ಭದ್ರತೆಯಲ್ಲಿ ಇಟ್ಟು ಉಳಿದ 14 ಮತಗಳನ್ನು ಎಣಿಕೆ ಮಾಡಲಾಯಿತು. ಅಧ್ಯಕ್ಷರಾಗಿ ಆಯ್ಕೆಯಾದ ಅಜಯಕುಮಾರ ಸರನಾಯಕ ಹಾಗೂ ಉಪಾಧ್ಯಕ್ಷರಾದ ಮುರಗೇಶ ಕಡ್ಲಿಮಟ್ಟಿಯವರಿಗೆ 8 ಮತಗಳು ಬಿದ್ದರೆ, ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜಬಾಲಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಪ್ರಕಾಶ ತಪಶೆಟ್ಟಿಯವರಿಗೆ 6 ಮತ ಬಿದ್ದವು.
ನೂತನ ಅಧ್ಯಕ್ಷ ಅಜೇಯ ಕುಮಾರ ಸರನಾಯಕ ಮಾತನಾಡಿ, ಕಳೆದ ಮೂರು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಸದಸ್ಯರು ಮತ್ತೆ ಆಯ್ಕೆ ಮಾಡಿದ್ದಾರೆ. ಈ ಬ್ಯಾಂಕಿನ ಚುನಾವಣೆಯಲ್ಲಿ ಪಕ್ಷ ಮುಖ್ಯವಲ್ಲ. ಅಭಿವೃದ್ಧಿ ಮುಖ್ಯ ಎಂದು ತೋರಿಸಿಕೊಟ್ಟಿದೆ ಎಂದರು.