ಬಾಗಲಕೋಟೆ : ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತಿದೆ. ಅದಕ್ಕೆ ಉದಾಹರಣೆ ಎಂಬಂತೆ ಜಿಲ್ಲೆಯ ಅಂಧ ವಿದ್ಯಾರ್ಥಿನಿಯೋರ್ವಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗುವ ಮೂಲಕ ಸಾಧನೆಗೈದಿದ್ದಾಳೆ.
ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದಲ್ಲಿ ಜ್ಯೋತಿ ಕಡಕೋಳ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ದೃಷ್ಟಿ ಸಮಸ್ಯೆ ಇದ್ದರೂ ಈಕೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 564 ಅಂಕ ಪಡೆದು, ಅಂಧ ವಿದ್ಯಾರ್ಥಿಗಳ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಓದಿ : SSLC Result: 579 ಅಂಕ, ಕನ್ನಡದಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ಪಡೆದ ಸೋಂಕಿತ ವಿದ್ಯಾರ್ಥಿ
ಉತ್ತೂರು ಗ್ರಾಮದ ಮಾರುತಿ-ಸುಮಂಗಲಾ ದಂಪತಿಯ ಪುತ್ರಿಯಾದ ಜ್ಯೋತಿ ಕಡಕೊಳ, ಹುಟ್ಟಿನಿಂದಲೂ ಕಣ್ಣಿನ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾಳೆ. ಹೊಳೆ ಆಲೂರು ಗ್ರಾಮದ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡಿದ ಈಕೆ, ಬ್ರೈಲ್ ಲಿಪಿ ಕಲಿತು ಅದರ ಮೂಲಕವೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಶೇ. 90.14 ರಷ್ಟು ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.

ಮುಂದೆ ಐಎಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುವ ಕನಸು ಹೊತ್ತಿರುವ ಈಕೆ, ತನ್ನಂತೆ ದೃಷ್ಟಿ ಸಮಸ್ಯೆ ಇರುವ ಮಕ್ಕಳಿಗೆ ನೆರವಾಗಬೇಕೆಂಬ ಮಹದಾಸೆ ಹೊಂದಿದ್ದಾಳೆ.