ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನು ಅವರ ಎಸ್ಕಾರ್ಟ್ ವಾಹನದ ಮೇಲೆ ಎಸೆದ ಮುಸ್ಲಿಂ ಮಹಿಳೆ ಕ್ಷಮೆಯಾಚಿಸಿದ್ದಾರೆ. ಮಾಧ್ಯಮಗಳಿಗೆ ಮಹಿಳೆ ಹೇಳಿಕೆ ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯನವರಿಗೆ ನೋವುಂಟು ಮಾಡಬೇಕೆಂಬ ಉದ್ದೇಶ ನಮ್ಮದಾಗಿರಲಿಲ್ಲ. ಹಣ ಬೇಡವೆಂದು ಸಿದ್ದರಾಮಯ್ಯನವರ ಕಾರು ಬಳಿ ಹೋಗಿ ಹೇಳಿದೆವು. ಅವರ ಕಾರನ್ನು ಹಿಂಬಾಲಿಸಿ ಹೋಗುವಾಗ ಹಣ ಕೈಜಾರಿ ಬಿದ್ದು ಹೋಗಿದೆ. ಇದರಿಂದ ತಪ್ಪಾಗಿದ್ದರೆ ನಾನು ಸಿದ್ದರಾಮಯ್ಯನವರ ಬಳಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಗಾಯಾಳು ಕುಟುಂಬಸ್ಥರಿಗೆ ಮಾನವೀಯತೆ ದೃಷ್ಟಿಯಿಂದ ಹಣ ಕೊಟ್ಟಿದ್ದೆ: ಸಿದ್ದರಾಮಯ್ಯ ಸ್ಪಷ್ಟನೆ
ವಿಡಿಯೋದಲ್ಲಿ ಕೈಮುಗಿದುಕೊಂಡೇ ಮಾತನಾಡಿರುವ ಮಹಿಳೆ, ಘಟನೆಗೆ ಸಂಬಂಧಿಸಿದಂತೆ ಯಾರು ತಪ್ಪು ಮಾಡಿದ್ದಾರೋ ಅವರನ್ನ ಬಂಧಿಸಲಿ. ಕೆಲವರಿಂದ ಕೆರೂರಿನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಅಮಾಯಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ನಮ್ಮ ಮನಸ್ಸಿಗೆ ಭಾರಿ ನೋವಾಗಿತ್ತು. ಈ ನೋವಿನಲ್ಲಿ ಸಿದ್ದರಾಮಯ್ಯನವರ ಮಂದೆ ಅನುಚಿತವಾಗಿ ನಡೆದುಕೊಳ್ಳಬೇಕಾಯಿತು. ಇದಕ್ಕಾಗಿ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಮಹಿಳೆ ತಿಳಿಸಿದ್ದಾರೆ.
ಅವರಿಗೆ ಅಗೌರವ ತೋರಿಸುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ. ಅವರಿಗೆ ಅವಮಾನ ಮಾಡುವ ಉದ್ದೇಶವೂ ಎಳ್ಳಷ್ಟು ನಮ್ಮಲ್ಲಿ ಇರಲಿಲ್ಲ. ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ನಮ್ಮ ಮನಸ್ಸಿಗೆ ತೀವ್ರ ಘಾಸಿಯಾಗಿದೆ. ಸಿದ್ದರಾಮಯ್ಯನವರು ಹಣ ನೀಡುವುದಕ್ಕಿಂತ ಅವರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂಬುದೇ ನಮ್ಮ ಕಳಕಳಿಯ ಮನವಿಯಾಗಿದೆ. ಸಿದ್ದರಾಮಯ್ಯನವರು ನಮ್ಮ ಸಮುದಾಯದ ನಾಯಕರಾಗಿದ್ದು, ಸದಾ ನಮ್ಮ ಸಮುದಾಯದ ಪರ ನಿಲ್ಲುವ ರಾಜಕಾರಣಿ. ಈ ರೀತಿ ಇರುವಾಗ ಅವರಿಗೆ ಅವಮಾನ ಮಾಡುವ ಮಟ್ಟಕ್ಕೆ ನಾವು ಹೋಗುವುದಿಲ್ಲ. ಆಕಸ್ಮಿಕವಾಗಿ ನಡೆದಿರುವ ಘಟನೆ ಇದಾಗಿಯೇ ಹೊರತು ಸಿದ್ದರಾಮಯ್ಯನವರಿಗೆ ಅಗೌರವ ತೋರಿಸುವ ಉದ್ದೇಶ ಇಲ್ಲ ಎಂದರು.
ಇದನ್ನೂ ಓದಿ: 'ನಮಗೆ ರೊಕ್ಕ ಬ್ಯಾಡ್ರಿ, ನ್ಯಾಯ ಬೇಕು': ಸಿದ್ದರಾಮಯ್ಯರ ವಾಹನದತ್ತ ಪರಿಹಾರದ ಹಣ ಎಸೆದು ಮಹಿಳೆಯ ಆಕ್ರೋಶ
ಕಳೆದ ದಿನ ನಡೆದ ಘಟನೆಯಿಂದಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದರಿಂದ ಇಂದು ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಕಲು ಮುಂದಾಗಿದ್ದಾರೆ.