ಬಾಗಲಕೋಟೆ: ಹೀಗೆ ತಲೆ ಮೇಲೆ ದೀಪದ ಪಣತಿ ಹೊತ್ತುಕೊಂಡು ಸಾಹಿತ್ಯ ಹಾಗೂ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ಈ ಕಲಾವಿದರ ಕುಣಿತ ನೋಡಿದರೆ ರೋಮಾಂಚನವಾಗುತ್ತದೆ. ಇವರು ಜಿಲ್ಲೆಯ ಕೆರೂರು ಪಟ್ಟಣದ ಕಲಾವಿದರು. ಗೌರಿ ಗಣೇಶ ಕಲಾ ತಂಡ ಎಂಬ ಸಂಘಟನೆ ಕಟ್ಟಿಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜಾನಪದ ಸಂಸ್ಕೃತಿಯನ್ನು ಪ್ರಚುರ ಪಡಿಸುತ್ತಿದ್ದಾರೆ.
ನವನಗರದ ಕಲಾಭವನದ ಆವರಣದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ 'ಮಾತಾಡ್ ಮಾತಾಡ್ ಕನ್ನಡ್' ಅಭಿಯಾನ ದಡಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಲೆಯ ಮೇಲೆ ಪಣತಿ ಹಾಗೂ ಕಾಲಿನಲ್ಲಿ ಗೆಜ್ಜೆ ಹಾಕಿಕೊಂಡು, ದೇವರ ಜಾನಪದ ಗೀತೆ ಹಾಡುತ್ತಾ, ಹೆಜ್ಜೆ ಹಾಕುತ್ತಾ ಕುಣಿಯುವುದು ನೋಡುವುದೇ ಚಂದ.
ಉಕ ಕಲಾವಿದರಿಗೆ ಸಿಗದ ಪ್ರಾಶಸ್ತ್ಯ: ಉತ್ತರ ಕರ್ನಾಟಕದಲ್ಲಿ ಜಾನಪದ ಕಲೆ ಇನ್ನೂ ಜೀವಂತವಾಗಿದೆ. ಆಧುನಿಕ ಯುಗದ ಭರಾಟೆ ಮಧ್ಯೆ ಜಾನಪದ ಕಲೆ ಬೆಳೆಸಿಕೊಂಡು ಬರುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಸಾಂಸ್ಕೃತಿಕ ಕಲೆಗಳ ಬೀಡಾಗಿದೆ. ಇಲ್ಲಿ ವಿವಿಧ ಬಗೆಯ ಜಾನಪದ ಕಲೆಗಳು ಇನ್ನೂ ಬೇರು ಬಿಟ್ಟಿವೆ. ಆದರೆ, ಬೆಂಗಳೂರಿನಲ್ಲಿ ನಡೆಯುವ ಜಾನಪದ ಜಾತ್ರೆ, ಮೇಳಗಳ ಸಮಯದಲ್ಲಿ ಉತ್ತರ ಜಾನಪದ ಕಲಾವಿದರಿಗೆ ಹೆಚ್ಚು ಪ್ರಾಶಸ್ತ್ಯ ಸಿಗದೆ ಇರುವುದು ವಿಪಯಾರ್ಸವೇ ಆಗಿದೆ.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಉಕ ಕಲಾವಿದರಿಗೆ ಸ್ಥಾನವಿಲ್ಲ: ಈ ಬಗ್ಗೆ ಕಲಾವಿದರಾದ, ರಂಗನಾಥ ಡಿ ಕೆ. ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಯಾವುದೇ ಜಾನಪದ ಮೇಳೆದಲ್ಲಿ ಉತ್ತರ ಕರ್ನಾಟಕ ಕಲಾವಿದರು ಕಡಿಮೆ ಸಂಖ್ಯೆಯಲ್ಲಿ ಇರುವ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು. ಆಧುನಿಕ ತಂತ್ರಜ್ಞಾನ ಹಾಗೂ ಮೊಬೈಲ್ ಭರಾಟೆ ಎಷ್ಟೇ ಮುಂದುವರೆದರೂ, ಉಕ ಭಾಗದಲ್ಲಿ ಜಾನಪದ ಕಲೆ ಮಾತ್ರ ಇನ್ನು ಜೀವಂತವಾಗಿದೆ. ಇಂತಹ ಕಲೆಯನ್ನು ರಾಷ್ಟ್ರದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕು ಎಂದು ಖ್ಯಾತ ಕಲಾವಿದರು ಅಭಿಪ್ರಾಯ ವ್ಯಕ್ತಪಡಿಸಿದರು.