ಬಾಗಲಕೋಟೆ: ಜಿಲ್ಲೆಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ನಿರ್ಮಾಣ ಅವಶ್ಯಕತೆ ಇದ್ದು, ಪಾರ್ಕ್ ನಿರ್ಮಾಣಕ್ಕೆ ಜಾಗ ಗುರುತಿಸಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಕ್ರಮ ಕೈಗೊಳ್ಳುವಂತೆ ಸಂಸದ ಪಿ.ಸಿ ಗದ್ದಿಗೌಡರ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ನೂತನ ಜಿ.ಪಂ ಸಭಾಭವನದಲ್ಲಿ ಜರುಗಿದ 3ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ತಯಾರಾಗುವ ಇಲಕಲ್ಲ ಸೀರೆ, ಗುಳೇದಗುಡ್ಡದ ಕಣಕ್ಕೆ ಹೆಸರುವಾಸಿಯಾಗಿದ್ದು, ಟೆಕ್ಸ್ಟೈಲ್ ಪಾರ್ಕ್ ನಿರ್ಮಿಸಿದರೆ ನೇಕಾರರಿಗೆ ಅನುಕೂಲವಾಗಲಿದೆ. ಆದ್ದರಿಂದ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಟೆಕ್ಸ್ಟೈಲ್ಸ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 40 ಕೋಟಿ ರೂ.ಗಳ ಅನುದಾನ ನೀಡಲಾಗುತ್ತಿದೆ. ಬೇರೆ ಬೇರೆ ಕಡೆ ನಿರ್ಮಿಸಲಾದ ಜವಳಿ ಪಾರ್ಕ್ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಸೂಕ್ತವಾದ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲು ಕ್ರಮ ವಹಿಸಲು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅನುದಾನದ ಕೊರತೆ ಇರುವುದಿಲ್ಲ. ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಾಣದ ಹಂತವಾರು ಜಿಪಿಎಸ್ ಮಾಡಿದರೆ ಮಾತ್ರ ಹಣ ಜಮಾ ಮಾಡಲಾಗುತ್ತಿದೆ. ಮನೆಗಳ ಜಿಪಿಎಸ್‍ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 2016-17 ರಿಂದ 2019-20ರ ವರೆಗೆ ಒಟ್ಟು 3,859 ಪೈಕಿ 1,850 ಮಾತ್ರ ಪೂರ್ಣಗೊಂಡಿವೆ. 947 ಇನ್ನು ಪ್ರಾರಂಭವಾಗದೇ ಉಳಿದಿದ್ದು, ಕೂಡಲೇ ಪ್ರಾರಂಭಿಸಲು ಕ್ರಮವಹಿಸಲು ತಿಳಿಸಿದರು.
ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣವಾದ ಬಗ್ಗೆ ಅಂಕಿ ಸಂಖ್ಯೆ ತೋರಿಸುವುದು ಮುಖ್ಯವಲ್ಲ. ಅವುಗಳ ಬಳಕೆಗೆ ಕ್ರಮವಹಿಸಬೇಕು. ಶೌಚಾಲಯ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲು ತಿಳಿಸಿದರು.
ಇದನ್ನೂ ಓದಿ: ಕಡಿಮೆ ದರದಲ್ಲಿ ಮರಳು ಒದಗಿಸಲು ಕ್ರಮ: ಸಚಿವ ನಿರಾಣಿ