ಬಾಗಲಕೋಟೆ: ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಭಾರಿ ಜಿಲ್ಲಾ ವ್ಯವಸ್ಥಾಪಕ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶಿವಾನಂದ ಮಹಾಂತಪ್ಪ ನಾಗನೂರ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮದ ನಿವಾಸಿ ರವೀಂದ್ರ ಹನಮಂತಪ್ಪ ಪೂಜಾರ ಎಂಬುವವರಿಗೆ ಸ್ವಯಂ ಉದ್ಯೋಗ ಯೋಜನೆ ಅಡಿ ಸರ್ಕಾರದಿಂದ 10 ಲಕ್ಷ ರೂ. ಮಂಜೂರು ಆಗಿತ್ತು. ಹಣ ಬಿಡುಗಡೆ ಮಾಡಲು ಅಧಿಕಾರಿಯು 25 ಸಾವಿರ ರೂ. ಬೇಡಿಕೆ ಇಟ್ಟಿದ್ದು, ಮೊದಲ ಕಂತಿನ 5 ಲಕ್ಷ ಬಿಡುಗಡೆಗೆ 10 ಸಾವಿರ ಹಣ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ದಾಳಿ ಸಮಯದಲ್ಲಿ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಡಿಎಸ್ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿದ್ದು, ರವೀಂದ್ರ ಪೂಜಾರ ಎಂಬುವವರು ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.