ಬಾಗಲಕೋಟೆ: ಬಾದಾಮಿ ತಾಲೂಕಿನ ಕಾಕನೂರಿನ ಕರ್ನಾಟಕ ನೀರಾವರಿ ನಿಗಮದ ಎಂ.ಎಲ್.ಬ.ಸಿ ಉಪ ವಿಭಾಗದ ಜ್ಯೂನಿಯರ್ ಎಂಜಿನಿಯರ್ ಬಸಲಿಂಗವ್ವ ಕೋಲಕೂರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬಾದಾಮಿ ತಾಲೂಕಿನ ಹಾಗನೂರು ಗ್ರಾಮದ ರಾಯನಗೌಡ ದೇಸಾಯಿಗೌಡ್ರ ಹಾಗೂ ಅವರ ಸಂಬಂಧಿಕರು ಸ್ವಂತ ಖರ್ಚಿನಲ್ಲಿ ಹಾವನೂರ ಗ್ರಾಮದಿಂದ ಕೆನಾಲ್ ಮುಖ್ಯ ರಸ್ತೆಗೆ ಸೇರುವ ಕೂಡು ರಸ್ತೆ ದುರಸ್ತಿ ಕಾಮಗಾರಿಗೆ ಸಂಬಂಧಿಸಿದ 1ನೇ ಕಂತಿನ 3,72,000 ರೂ.ಗಳ ಬಿಡುಗಡೆ ಮಾಡಲು ಶೇ. 20ರಂತೆ ಒಟ್ಟು 74,400 ರೂ. ನೀಡಲು ಬೇಡಿಕೆ ಇಟ್ಟಿದ್ದರಂತೆ. ಈ ಪೈಕಿ 25 ಸಾವಿರ ರೂ.ಗಳನ್ನು ತಂದು ಕೊಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. 25 ಸಾವಿರ ರೂ.ಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದು, ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಎಸಿಬಿ ಡಿಎಸ್ಪಿ ಗಣಪತಿ ಗುಡಾಜಿ ಮತ್ತು ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.