ಬಾಗಲಕೋಟೆ: ತಮಗೆ ಜೀವ ಭಯವಿದೆ, ರಕ್ಷಣೆ ಕೊಡಿ ಎಂದು ಅಂತರ್ಧರ್ಮೀಯ ಮದುವೆಯಾದ ಪ್ರೇಮಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಮಖಂಡಿ ಪಟ್ಟಣದ ನಿವಾಸಿಯಾಗಿರುವ ಈ ಯುವ ಜೋಡಿ ಕಳೆದ ಹಲವು ವರ್ಷಗಳಿಂದ ಪ್ರೀತಿಸಿದ್ದರು. ಯುವತಿಯ ಮನೆಯಲ್ಲಿ ಬೇರೆ ಯುವಕನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಬೆನ್ನಲ್ಲೇ ಯುವಕ-ಯುವತಿ ಹಿಂದೂ ಧರ್ಮದ ಪದ್ಧತಿಯಂತೆ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಗಜಾನನ ಮಲ್ಲಪ್ಪ ಕಾಂಬ್ಳೆ ಎಂಬ ಯುವಕನೊಂದಿಗೆ ಸುಮಾ ಎಂದು ಹೆಸರು ಬದಲಾವಣೆ ಮಾಡಿಕೊಂಡು ಯುವತಿ ಮದುವೆಯಾಗಿದ್ದಾರೆ.
ಯುವತಿಯ ಮನೆಯಲ್ಲಿ ಹಾಗೂ ಅವರ ಸಮಾಜದ ವತಿಯಿಂದ ಜೀವ ಭಯ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಅವರನ್ನು ಜೋಡಿ ಭೇಟಿಯಾಗಿ, ಜೀವ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಲ್ಲದೇ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಯುವತಿಯ ಮನೆಯವರು ಜಮಖಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.