ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಯಾವುದೇ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ವರದಿ ಆಗಿಲ್ಲ. ಆದರೆ ಮೂವರು ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲಾಮಟ್ಟದಲ್ಲಿ ಇದು ಸಮಾಧಾನಕರ ಸಂಗತಿಯಾಗಿದೆ.
ಢಾಣಕಶಿರೂರ ಗ್ರಾಮದ ಓರ್ವ ಬಾಲಕಿ ಸೇರಿದಂತೆ ಮೂವರು ಸೋಂಕಿತರು ಗುಣಮುಖರಾಗಿದ್ದು ಮೂವರನ್ನೂ ಆಸ್ಪತ್ರೆಯಿಂದ ಡಿಸ್ಚಾಜ್೯ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 45 ಆದಂತಾಗಿದೆ. ಢಾಣಕಶಿರೂರ ಗ್ರಾಮದ 16 ವರ್ಷದ ಬಾಲಕಿ ಪಿ-692, 47 ವರ್ಷದ ಪುರುಷ ಪಿ-684, 28 ವರ್ಷದ ಯುವಕ ಪಿ-855 ಸೋಂಕಿನಿಂದ ಗುಣಮುಖರಾದವರು.
ಗುಣಮುಖರಾದವರು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ವೈದ್ಯರು ಹಾಗೂ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಶುಭ ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಪ್ರಮಾಣ ಪತ್ರ ವಿತರಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವಂತೆ ಸೂಚನೆ ನೀಡಿ ಬೀಳ್ಕೊಟ್ಟರು.